ಸಮಾನ ಸಮಾಜ ಅಂಬೇಡ್ಕರ್ ಕನಸು: ಸಚಿವ ಶಾಮನೂರು

ದಾವಣಗೆರೆ, ಎ.14: ಕಳೆದ ಒಂದು ಶತಮಾನದ ಹಿಂದೆಯೇ ಸಮಾನ ಸಮಾಜದ ಕನಸು ಕಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೊಂದಿದ್ದ ದೂರ ದೃಷ್ಟಿ ಅಸಾಮಾನ್ಯವಾದುದು ಎಂದು ತೋಟಗಾರಿಕೆ ಖಾತೆ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.
ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ಗುರುವಾರ ನಡೆದ ಸಂವಿದಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಂತಹ ಜಾತ್ಯಾತೀತ ರಾಷ್ಟ್ರಕ್ಕೆ ಹೊಂದಿಕೊಳ್ಳುವಂಥಹ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ವಿಶ್ವಸಂಸ್ಥೆಯೇ ಮುಂದಾಗಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಸ್ವಾತಂತ್ರ ಬಂದು ಇಷ್ಟು ವರ್ಷಗಳಾದರೂ ಇನ್ನು ಕೆಲವೆಡೆ ಅಸ್ಪಶ್ಯತೆ ತಾಂಡವಾಡುತ್ತಿರುವುದು ಬೇಸರದ ಸಂಗತಿ. ಅಂದು ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವೇ ಇಂದು ನಮ್ಮ ಬೈಬಲ್ ಆಗಿದ್ದು, ಅಂಬೇಡ್ಕರ್ ಹಾಕಿದ ಸಮಾನತೆಯ ತಳಹದಿಯ ಮೇಲೆ ಎಲ್ಲರೂ ಸಾಗಬೇಕಿದೆ ಎಂದರು.
ಬಿಜೆಪಿ ಹಾಗೂ ಆರೆಸ್ಸೆಸ್ ಮೀಸಲಾತಿ ನಿಲ್ಲಿಸುವಂತೆ ಒತ್ತಾಯಿಸುವ ಮೂಲಕ ಹಿಂದುಳಿದವರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಪಿತೂರಿ ನಡೆಸುತ್ತಿದ್ದು, ಬಿಜೆಪಿ ಮುಂದಿನ ದಿನಗಳಲ್ಲಿ ಮೀಸಲಾತಿಯನ್ನು ಕಿತ್ತಾಕುವ ಮೂಲಕ ಅಲ್ಪಸಂಖ್ಯಾತರನ್ನು ಸಂಪೂರ್ಣ ನಾಶಗೊಳಿಸುವ ಹುನ್ನಾರ ನಡೆಸಿದೆ ಎಂದು ಅವರು ಆರೋಪಿಸಿದರು.
ನಂತರ ಉಪನ್ಯಾಸಕ ಡಾ.ಎ.ಬಿ. ರಾಮಚಂದ್ರಪ್ಪ ಅಂಬೇಡ್ಕರ್ ಅವರ ಕುರಿತು ಮಾತನಾಡಿ, ಎಲ್ಲಾ ಸಂಪತ್ತನ್ನು ಧ್ರುವೀಕರಿಸಿ ಬದುಕುವ ಮೇಲ್ಜಾತಿ ಸಮುದಾಯದವರು ತಮಗೂ ಮೀಸಲಾತಿ ಕೇಳುವ ಮೂಲಕ ಮೀಸಲಾತಿಯನ್ನು ಸಂಪೂರ್ಣ ನಾಶ ಮಾಡುವ ಹುನ್ನಾರ ನಡೆಸುತ್ತಿವೆ ಎಂದ ಅವರು, ಅಂಬೇಡ್ಕರ್ ಜಯಂತಿ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳ್ಳದೆ ಅವರ ಆಚಾರ, ವಿಚಾರಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಎಲ್ಲಾ ವರ್ಗದವರಿಗೂ ಸಮಾನತೆ ಒದಗಿಸಬೇಕಿದೆ ಎಂದರು.
ಕಾರ್ಯಕ್ರಮಲ್ಲಿ ಮಾಯಕೊಂಡ ಶಾಸಕ ಕೆ. ಶಿವಮೂರ್ತಿ ನಾಯ್ಕ, ನೂತನ ಮೇಯರ್ ಅಶ್ವಿನಿ ಪ್ರಶಾಂತ್, ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ, ಪ್ರಭಾರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಗಿರೀಶ್, ಪಾಲಿಕೆ ಆ1ುುಕ್ತ ಬಿ.ಎಚ್. ನಾರಾಯಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಉಪವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಮಂಜುನಾಥ್ ಬಳ್ಳಾರಿ, ಎಪಿಎಂಸಿ ನೂತನ ಅಧ್ಯಕ್ಷ ಚಂದ್ರಶೇಖರ್, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಜಿಪಂ ಸದಸ್ಯ ಬಸವಂತಪ್ಪ, ಪುಷ್ಪಾಜಗನ್ನಾಥ್, ಬಿ.ಎಚ್. ವೀರಭದ್ರಪ್ಪ ಮತ್ತಿತರರಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಚ್.ಡಿ. ಕುಮಾರ ಹನುಮಂತಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭ ಅಂಬೇಡ್ಕರ್ ಕುರಿತ ಹೊತ್ತಿಗೆ ಬಿಡುಗಡೆ ಮಾಡಲಾಯಿತು.







