ಜಗದೀಶ್ ಕಾರಂತ್ ಪ್ರವೇಶಕ್ಕೆ ನಿರ್ಬಂಧ
ಮಡಿಕೇರಿ, ಎ. 14: ರಾಮನವಮಿ ಪ್ರಯುಕ್ತ ಎ. 15ರಂದು ಸೋಮವಾರ ಪೇಟೆಯಲ್ಲಿ ಹಮ್ಮಿಕೊಂಡಿರುವ ಸಭಾ ಕಾರ್ಯಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಆಗಮಿಸುವುದನ್ನು ಜಿಲ್ಲಾಧಿ ಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳೂ ಆದ ಮೀರ್ ಅನೀಸ್ ಅಹಮ್ಮದ್ ನಿರ್ಬಂಧಿಸಿದ್ದಾರೆ. ಶುಕ್ರವಾರ ಸಂಜೆ 5 ಗಂಟೆಯಿಂದ 6 ಗಂಟೆಯವರೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಗದೀಶ್ ಕಾರಂತ್ ಅವರು ಪಾಲ್ಗೊಳ್ಳಬೇಕಾಗಿತ್ತು. ಆದರೆ ಪ್ರಚೋದನಾಕಾರಿ ಭಾಷಣ ಮಾಡುವ ಸಾಧ್ಯತೆಗಳಿರುವುದರಿಂದ ಮತ್ತು ಈ ಭಾಷಣದಿಂದ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡುವ ಸಾಧ್ಯತೆಗಳಿರುವ ಕಾರಣ ಕಾರಂತ್ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಅಲ್ಲದೆ ಎ.15 ರಂದು ಸೋಮವಾರಪೇಟೆಯಲ್ಲಿ ಯಾವುದೇ ಸಭಾ ಕಾರ್ಯಕ್ರಮಗಳನ್ನು ನಡೆಸದಂತೆ ಮತ್ತು ಜಗದೀಶ್ ಕಾರಂತ್ ಅವರ ಭಾಷಣದ ಧ್ವನಿ ತುಣುಕು ಹಾಗೂ ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಿದ್ದಾರೆ. ಸೋಮವಾರಪೇಟೆಯಲ್ಲಿ ರಾಮನವಮಿ ಆಚರಣೆ ಸಂದರ್ಭ ಸಿಡಿಮದ್ದುಗಳನ್ನು ಸಿಡಿಸುವುದಕ್ಕೂ ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.





