ಕೋಮುವಾದಿ ಪಕ್ಷಗಳಿಗೆ ಅಂಬೇಡ್ಕರ್ ಜನ್ಮದಿನ ಆಚರಿಸುವ ಹಕ್ಕಿಲ್ಲ: ಎನ್.ಮಹೇಶ್

ಮೂಡಿಗೆರೆ, ಎ.14: ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಳ್ಳದ ಆರೆಸ್ಸೆಸ್ ಪ್ರಾಯೋಜಕತ್ವದ ಕೋಮುವಾದಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಮಹಾನ್ ಮಾನವತಾವಾದಿ ಡಾ.ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲು ನೈತಿಕ ಹಕ್ಕಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಅಧ್ಯಕ್ಷ ಎನ್.ಮಹೇಶ್ ಹೇಳಿದ್ದಾರೆ.
ಅವರು ಜೇಸಿ ಭವನದಲ್ಲಿ ತಾಲೂಕು ಬಿಎಸ್ಪಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳೂ ಸಂವಿಧಾನವನ್ನೇ ಬದಿಗಿರಿಸಿ ಚುನಾವಣೆ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಮೂಲಕ ಅಂಬೇಡ್ಕರ್ ಸಿದ್ಧಾಂತವನ್ನು ಹೈಜಾಕ್ ಮಾಡುತ್ತಿವೆ. ಹಣ ಹೆಂಡ ಹಂಚಿ ಅಧಿಕಾರಕ್ಕೂ ಬರುತ್ತಿದೆ. ಮೊಸಳೆ ಕಣ್ಣೀರು ಸುರಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಿದಂತೆ ನಾಟಕವಾಡಿ, ಅಂಬೇಡ್ಕರ್ ಭಾವಚಿತ್ರವನ್ನು ಮಾರಾಟ ಮಾಡಲು ಹೊರಟಿದೆ ಎಂದು ಕಿಡಿಕಾರಿದರು. ನರೇಂದ್ರ ಮೋದಿ ಅವರು ಅಂಬೇಡ್ಕರ್ ಸ್ಮಾರಕ ಹಾಗೂ ಯಾತ್ರಾಸ್ಥಳವನ್ನು ನಿರ್ಮಿಸುವುದಾಗಿ ಪದೇಪದೇ ಹೇಳಿಕೆ ಕೊಡುತ್ತಾ, ಅಂಬೇಡ್ಕರ್‌ವಾದಿ ಓಟ್‌ಬ್ಯಾಂಕ್ ಸೃಷ್ಟಿಸುತ್ತಿದ್ದಾರೆ. ನಿಜವಾದ ಸ್ಮಾರಕ ಹಾಗೂ ಯಾತ್ರಾಸ್ಥಳವನ್ನು ಪ್ರಾರಂಭಿಸಿರುವುದು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರು. ಒಂದು ಸಾವಿರ ಎಕರೆ ಭೂಮಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂತಹ ಸ್ಮಾರಕ ಹಾಗೂ ಯಾತ್ರಾಸ್ಥಳವನ್ನು ನಿರ್ಮಿಸಿರುವುದು ನರೇಂದ್ರ ಮೋದಿಯವರು ಒಮ್ಮೆ ಹೋಗಿ ನೋಡಿಬರಲಿ ಎಂದು ಹೇಳಿದರು.
ಪ್ರಜಾಪ್ರಭುತ್ವ ಸ್ಥಾಪನೆಯಾಗಿ 68 ವರ್ಷಗಳು ಕಳೆದರೂ ದೇಶದಲ್ಲಿ ಶೇ.45ರಷ್ಟು ಬಡತನ ಬಾಕಿ ಉಳಿದಿರುವುದು ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಪಕ್ಷಗಳುೆ ಅಂಬೇಡ್ಕರ್ ಅವರ ಹೆಸರನ್ನು ಹೇಳುವುದು ರಾಜಕೀಯ ನಾಟಕವಾಗಿದೆ. ಈ ಪಕ್ಷಗಳಿಗೆ ರಾಜಕೀಯ ಶಿಕ್ಷಣದ ಅಗತ್ಯವಿದೆ. ಈ ಶಿಕ್ಷಣವನ್ನು ನೀಡಲು ಬಿಎಸ್ಪಿ ಬದ್ಧ ವಿದೆ ಎಂದರು.
800 ವರ್ಷಗಳು ಮೊಘಲರ ಆಳ್ವಿಕೆ 250 ವರ್ಷಗಳ ಬ್ರಿಟಿಷರ ಆಳ್ವಿಕೆ, ಅವರಿಗಿಂತ ಕೀಳುಮಟ್ಟದ ರಾಜಕೀಯ ನಾಟಕವಾಡುವ ಕಾಂಗ್ರೆಸ್ ಪಕ್ಷ 1885ರಲ್ಲಿ ಸ್ಥಾಪನೆಗೊಂಡು ತತ್ವ, ಸಿದ್ಧಾಂತವನ್ನು ಎಂದೂ ಕೂಡ ಉಳಿಸಿಕೊಳ್ಳದೆ 1984ರಲ್ಲಿ ಹುಟ್ಟಿಕೊಂಡ ಬಿಜೆಪಿ ಎಂಬ ಕೋಮುವಾದಿ ಪಕ್ಷಕ್ಕೂ ತಮಗೂ ಹೆಚ್ಚಿನ ವ್ಯತ್ಯಾಸವಿಲ್ಲವೆಂದು ತೋರಿಸಿಕೊಟ್ಟ ಕಾಂಗ್ರೆಸ್ ಇಂದಿಗೂ ಉದ್ಧಾರವಾಗಿಲ್ಲ ಎಂದು ಹೇಳಿದರು. ಪ್ರಾರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಕ್ಕಿ ಮಂಜುನಾಥ್ ತಂಡದ ಅಂಬೇಡ್ಕರ್ ಕುರಿತ ಹಾಡು ನೆರೆದಿದ್ದವರನ್ನು ರಂಜಿಸಿತು. ಕ್ಷೇತ್ರ ಸಮಿತಿ ಅಧ್ಯಕ್ಷ ರವೂಫ್‌ಖಾನ್ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಲೋಕವಳ್ಳಿ ರಮೇಶ್, ಟಿ.ಕೆ.ಬಸವರಾಜ್, ಯು.ಬಿ.ಮಂಜಯ್ಯ, ವಕೀಲ ಪರಮೇಶ್, ಬೆಟ್ಟಗೆರೆ ಶಂಕರ್, ಕೆ.ರಾಮು, ಪಿ.ಕೆ.ಮಂಜುನಾಥ್, ಬಣಕಲ್ ಮುಹಮ್ಮದ್ ಅಲಿ, ಉದುಸೆ ನಾಗೇಶ್, ರೈತ ಸಂಘದ ಎಂ.ಮಂಜುನಾಥ್‌ಗೌಡ, ಮರಗುಂದ ಪ್ರಸನ್ನ ಮತ್ತಿತರರಿದ್ದರು.







