ಮಂಗಳೂರು : ಮಹಿಳೆಯ ಕುತ್ತಿಗೆಯಿಂದ 3.42 ಲಕ್ಷ ರೂ. ವೌಲ್ಯದ ಸರ ಕಳವು

ಮಂಗಳೂರು, ಎ. 14: ಅಪರಿಚಿತ ವ್ಯಕ್ತಿಯೋರ್ವ ನಗರದ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ವೀಕ್ಷಿಸಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯೋರ್ವ ಕುತ್ತಿಗೆಯಿಂದ ಚಿನ್ನದ ಸರಗಳನ್ನು ಕಸಿದು ಪರಾರಿಯಾಗಿರುವ ಘಟನೆ ನಡೆದಿದೆ. ಕಳವಾಗಿರುವ ಚಿನ್ನದ ಸರಗಳ ಒಟ್ಟು ವೌಲ್ಯ 3,42,000 ರೂ. ಎಂದು ಅಂದಾಜಿಸಲಾಗಿದೆ.
ಡೊಂಗರಕೇರಿಯ ಭೋಜರಾವ್ ಲೇನ್‌ನ ಜ್ಯೋತಿ ಅಪಾರ್ಟ್‌ಮೆಂಟ್‌ನ ನಿವಾಸಿ ಮಂಜುನಾಥ ಕಿಣಿ ಎಂಬವರ ಪತ್ನಿ ಉಷಾ ಎಂ.ಕಿಣಿ ಎಂಬವರೇ ಸರಗಳನ್ನು ಕಳೆದುಕೊಂಡವರು.
ಉಷಾ ಕಿಣಿ ಅವರು ಬುಧವಾರ ವೆಂಕಟರಮಣ ದೇವಸ್ಥಾನದ ರಥೋತ್ಸವವನ್ನು ವೀಕ್ಷಿಸಿ ತಮ್ಮ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಇವರನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಉಷಾ ಅವರು ಸರಸ್ವತಿ ಸಭಾಭವನದ ಬಳಿ ತಲುಪುತ್ತಿದ್ದಂತೆ ಅಪರಿಚಿತ ವ್ಯಕ್ತಿ ಏಕಾಏಕಿ ಇವರ ಕುತ್ತಿಗೆಗೆ ಕೈ ಹಾಕಿ ಅವರು ಧರಿಸಿದ್ದ 28 ಗ್ರಾಂ ತೂಕದ ಒಂದು ಚಿನ್ನದ ಕರಿಮಣಿ ಸರ, 42 ಗ್ರಾಂ ತೂಕದ ಒಂದು ಹವಳದ ಸರ-1, 56 ಗ್ರಾಂ ತೂಕದ ಒಂದು ಡಾಲರ್ ಸಹಿತ ಚಿನ್ನದ ಸರಗಳನ್ನು ಕಿತ್ತು ಅವರನ್ನು ದೂಡಿಹಾಕಿದ್ದು, ಬಳಿಕ ಹತ್ತಿರದಲ್ಲೇ ಕಾದು ಕುಳಿತಿದ್ದ ಇನ್ನೋರ್ವ ಅಪರಿಚಿತ ಯುವಕನೊಂದಿಗೆ ಪರಾರಿಯಾಗಿದ್ದಾನೆ ಎಂದು ಉಷಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೂರ್ವ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.





