ದಕ್ಷಿಣ ಕೊರಿಯ: ಚುನಾವಣೆಯಲ್ಲಿ ಅಧ್ಯಕ್ಷೆಯ ಪಕ್ಷಕ್ಕೆ ಆಘಾತಕಾರಿ ಸೋಲು

ಸಿಯೋಲ್, ಎ. 14: ದಕ್ಷಿಣ ಕೊರಿಯದಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷೆ ಪಾರ್ಕ್ ಗಿಯುನ್-ಹೈ ಅವರ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಆಘಾತಕಾರಿ ಸೋಲನ್ನು ಅನುಭವಿಸಿದೆ.
ಇದರೊಂದಿಗೆ ಪಕ್ಷವು 16 ವರ್ಷಗಳ ಕಾಲ ಹೊಂದಿದ್ದ ಸಂಸದೀಯ ಬಹುಮತವನ್ನು ಕಳೆದುಕೊಂಡಿದೆ ಹಾಗೂ ಇದು 2017ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷೀಯ ಹುದ್ದೆಯನ್ನು ಉಳಿಸಿಕೊಳ್ಳುವ ಪಕ್ಷದ ಪ್ರಯತ್ನಗಳಿಗೆ ಬೆದರಿಕೆಯಾಗಿ ಪರಿಣಮಿಸಿದೆ.
ಪಕ್ಷದ ಆರ್ಥಿಕ ನೀತಿಗಳಿಗಾಗಿ ಮತದಾರರು ಅದನ್ನು ದಂಡಿಸಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣದಿಂದ ಮುಖ್ಯವಾಗಿ ಯುವಜನರು ಈ ಆಡಳಿತದ ಬಗ್ಗೆ ಭ್ರಮನಿರಸನ ಹೊಂದಿದ್ದರು ಎನ್ನಲಾಗಿದೆ.
ಅಧ್ಯಕ್ಷೆಯಾಗಿ ಪಾರ್ಕ್‌ರ ಐದು ವರ್ಷಗಳ ಅವಧಿಯಲ್ಲಿ ಇನ್ನೂ ಎರಡು ವರ್ಷಗಳು ಬಾಕಿಯಿವೆ. ಆದರೆ, ಈ ಅವಧಿಯಲ್ಲಿ ಕಾರ್ಮಿಕ ಸುಧಾರಣೆಗಳು ಸೇರಿದಂತೆ ತನ್ನ ಕನ್ಸರ್ವೇಟಿವ್ ಪಕ್ಷದ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ತನ್ನ ಪ್ರಯತ್ನದಲ್ಲಿ ಅವರು ಸಾಕಷ್ಟು ಹಿನ್ನಡೆ ಅನುಭವಿಸಲಿದ್ದಾರೆ.
ಉತ್ತರ ಕೊರಿಯದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿದ್ದು, ಆ ದೇಶದ ವಿರುದ್ಧ ಪಾರ್ಕ್ ತಳೆದಿರುವ ಆಕ್ರಮಣಕಾರಿ ನಿಲುವು ಅವರಿಗೆ ಚುನಾವಣೆಯಲ್ಲಿ ಲಾಭ ತರಲಿದೆ ಎಂಬುದಾಗಿ ಸಮೀಕ್ಷೆಗಳು ಹೇಳಿದ್ದವು.
ಆದರೆ, ಉತ್ತರ ಕೊರಿಯದೊಂದಿಗಿನ ಉದ್ವಿಗ್ನತೆ ಚುನಾವಣೆಯ ಮೇಲೆ ಪರಿಣಾಮ ಬೀರಿಲ್ಲ.
‘‘ಇದು ಅಧ್ಯಕ್ಷೆ ಪಾರ್ಕ್ ವಿರುದ್ಧ ಮತದಾರರು ನೀಡಿದ ತೀರ್ಪು. ಹದಗೆಡುತ್ತಿರುವ ಆರ್ಥಿಕತೆ ಮತ್ತು ಹೆಚ್ಚುತ್ತಿರುವ ಅಸಮಾನತೆಯ ಹಿನ್ನೆಲೆಯಲ್ಲಿ ಜನರು ಅದುಮಿಟ್ಟಿದ್ದ ಆಕ್ರೋಶ ಈ ಚುನಾವಣೆಯಲ್ಲಿ ಸ್ಫೋಟಗೊಂಡಿದೆ’’ ಎಂದು ವಿಶ್ವವಿದ್ಯಾನಿಲಯವೊಂದರ ರಾಜಕೀಯ ಪ್ರೊಫೆಸರ್ ಒಬ್ಬರು ಹೇಳುತ್ತಾರೆ.
300 ಸದಸ್ಯರ ಸದನದಲ್ಲಿ ಪಾರ್ಕ್‌ರ ಸೇನುರಿ ಪಕ್ಷ ಕೇವಲ 122 ಸ್ಥಾನಗಳನ್ನು ಪಡೆದಿದೆ. ಕಳೆದ ಸಂಸತ್ತಿನಲ್ಲಿ ಅದು 152 ಸ್ಥಾನಗಳನ್ನು ಹೊಂದಿತ್ತು.
ಮೂರು ಉದಾರವಾದಿ ಪ್ರತಿಪಕ್ಷಗಳು ಒಟ್ಟಿಗೆ 167 ಸ್ಥಾನಗಳನ್ನು ಗಳಿಸಿವೆ. ಪ್ರಧಾನ ಪ್ರತಿಪಕ್ಷ ಮಿಂಜೂ ಪಾರ್ಟಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು 123 ಸ್ಥಾನಗಳನ್ನು ಪಡೆದಿದೆ.





