Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಉಗ್ರವಾದ: ಭಾರತದ ನಿಲುವೇನು?

ಉಗ್ರವಾದ: ಭಾರತದ ನಿಲುವೇನು?

ವಾರ್ತಾಭಾರತಿವಾರ್ತಾಭಾರತಿ14 April 2016 11:24 PM IST
share

ಭಯೋತ್ಪಾದನೆಯ ಕುರಿತಂತೆ ವಿಶ್ವ ಕಠಿಣ ಧೋರಣೆಯನ್ನು ತಳೆಯಬೇಕು ಎಂದು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಆಗಾಗ ವಿಶ್ವಸಂಸ್ಥೆಗೆ ತಮ್ಮ ಘನ ಗಂಭೀರವಾದ ಸಲಹೆಯನ್ನು ನೀಡುವುದಿದೆ. ಭಯೋತ್ಪಾದನೆಯ ವಿಷಯದಲ್ಲಿ ವಿಶ್ವ ದ್ವಂದ್ವ ನೀತಿಯನ್ನು ಅನುಸರಿಸಬಾರದು ಎಂದು ಅವರೂ ಹಲವು ಬಾರಿ ವಿದೇಶಗಳಲ್ಲಿ ಕರೆ ನೀಡಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ, ನರೇಂದ್ರ ಮೋದಿಯವರು ತಮ್ಮ ಕಾಲ ಬುಡದಲ್ಲೇ ಭಯೋತ್ಪಾದನೆ ಹುಲುಸಾಗಿ ಬೆಳೆಯುತ್ತಿದ್ದರೂ ಅದರ ಕುರಿತಂತೆ ಕುರುಡರಂತೆ ವರ್ತಿಸುತ್ತಿರುವುದನ್ನು ವಿಶ್ವ ಆತಂಕದಿಂದ ಗಮನಿಸುತ್ತಿದೆ. ಇಂದು ಭಾರತ ದೇಶದಲ್ಲಿ ಆಳಕ್ಕೆ ಬೇರಿಳಿಸುತ್ತಿರುವ ಕೇಸರಿ ಭಯೋತ್ಪಾದಕರನ್ನು ವಿಶ್ವ ಗಂಭೀರವಾಗಿ ತೆಗೆದುಕೊಂಡಿದೆ ಮತ್ತು ಆ ಬಗ್ಗೆ ಭಾರತಕ್ಕೆ ಎಚ್ಚರಿಕೆಯನ್ನೂ ನೀಡುತ್ತಾ ಬಂದಿದೆ. ಆದರೆ ನರೇಂದ್ರ ಮೋದಿ ಅದನ್ನು ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಾ ಬರುತ್ತಿದ್ದಾರೆ. ಆ ಮೂಲಕ, ದೇಶದಲ್ಲಿ ಕೇಸರಿ ಉಗ್ರವಾದ ಮರವಾಗಿ ಬೆಳೆಯುವುದಕ್ಕೆ ಪರೋಕ್ಷ ಕಾರಣವಾಗುತ್ತಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಕೈಗೆತ್ತಿಕೊಳ್ಳಬಹುದಾಗಿದೆ. 2006ರಲ್ಲಿ ಸಂಭವಿಸಿದ ಮಾಲೆಗಾಂವ್ ಸ್ಫೋಟವನ್ನು ಎಂದಿನಂತೆಯೇ ಮುಸ್ಲಿಮರ ತಲೆಗೇ ಕಟ್ಟಲಾಗಿತ್ತು. ಬರೇ ಮಾಲೆಗಾಂವ್ ಸ್ಫೋಟ ಪ್ರಕರಣ ಮಾತ್ರವಲ್ಲ, ಮಕ್ಕಾ ಮಸೀದಿ ಸ್ಫೋಟ, ಅಜ್ಮೀರ್ ಸ್ಫೋಟ ಮೊದಲಾದ ದುರಂತಗಳಲ್ಲೂ ತನಿಖೆ ನಡೆಯುವ ಮೊದಲೇ ಆರೋಪಿಗಳನ್ನು ಘೋಷಿಸಿಯಾಗಿತ್ತು. ಒಂದು ರೀತಿಯಲ್ಲಿ ಮಾಧ್ಯಮಗಳೇ ವಿಚಾರಣೆ ನಡೆಸಿ ಆರೋಪಿಗಳು ಯಾರು ಎನ್ನುವುದನ್ನು ಘೋಷಿಸಿದ್ದವು. ಈ ಮಾಧ್ಯಮಗಳ ವರದಿಗಳನ್ನು ಕೇಸರಿ ಉಗ್ರವಾದಿಗಳು ನಿಯಂತ್ರಿಸುತ್ತಿದ್ದರು. ಪರಿಣಾಮವಾಗಿ ನೂರಾರು ಅಮಾಯಕ ಮುಸ್ಲಿಮರು ಆರೋಪಿಗಳಾಗಿ, ಉಗ್ರರ ಹಣೆ ಪಟ್ಟಿ ಹೊತ್ತು ಜೈಲು ಸೇರಿದರು. ಈ ‘ಉಗ್ರ’ರ ಕುರಿತಂತೆ ಮಾಧ್ಯಮಗಳು ಪುಂಖಾನುಪುಂಖವಾಗಿ ಕತೆಗಳನ್ನು ಬರೆದು ದೇಶವನ್ನು ನಂಬಿಸಿದವು. ಆದರೆ ಹೇಮಂತ್ ಕರ್ಕರೆ ನೇತೃತ್ವದ ತನಿಖಾ ತಂಡ ಈ ದೇಶದೊಳಗೆ ಕಾಳ ಸರ್ಪಗಳಂತೆ ಹರಡಿಕೊಂಡಿರುವ ದೇಶದ ಅನ್ನ ತಿಂದು ದೇಶಕ್ಕೇ ಬಾಂಬಿಕ್ಕಿದ ಕೇಸರಿ ಉಗ್ರರ ಹೊಸ ಜಾಲಗಳನ್ನು ಪರಿಚಯಿಸಿದವು. ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ಸ್ಫೋಟ, ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳಲ್ಲಿ ಕೇಸರಿ ಉಗ್ರರ ಕೈವಾಡಗಳನ್ನು ಬಹಿರಂಗಪಡಿಸಿದವು. ಇದಾದ ಬಳಿಕದ ಕತೆ ಗೊತ್ತೇ ಇದೆ. ಈ ತನಿಖೆಯಲ್ಲಿ ಭಾಗವಹಿಸಿದ ಕರ್ಕರೆ ಮತ್ತು ಅತ್ಯುನ್ನತ ಅಧಿಕಾರಿಗಳ ದೊಡ್ಡ ಪಡೆಯನ್ನೇ ಉಗ್ರರು ಬಲಿ ತೆಗೆದುಕೊಂಡರು. ಅವರನ್ನು ಯಾಕೆ ಕೊಲ್ಲಲಾಯಿತು? ಯಾರು ಕೊಂದರು? ಎನ್ನುವುದರ ಬಗ್ಗೆ ಪ್ರಶ್ನೆಗಳು ಉತ್ತರವಿಲ್ಲದೇ ಬಿದ್ದುಕೊಂಡಿವೆ. ಇದೇ ಸಂದರ್ಭದಲ್ಲಿ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಯಿತು. ಸ್ವಾಮೀಜಿ, ಸಾಧ್ವಿಗಳ ಮುಖವಾಡದಲ್ಲಿದ್ದ ಉಗ್ರರು ಜೈಲು ಸೇರಿದರು. ವಿಪರ್ಯಾಸವೆಂದರೆ, ಒಂದೆಡೆ ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧಿಸಲ್ಪಟ್ಟ ಅಮಾಯಕ ಮುಸ್ಲಿಮರು ಜೈಲಿನಲ್ಲಿರುವಾಗಲೇ, ಕರ್ನಲ್ ಪುರೋಹಿತ್, ಸಾಧ್ವಿ ಪ್ರಜ್ಞಾಸಿಂಗ್ ಮೊದಲಾದವರನ್ನು ಎನ್‌ಐಎ ಬಂಧಿಸಿತು. ಇದರ ಜೊತೆ ಜೊತೆಗೇ ಹಲವು ಯುವಕರನ್ನು ಎನ್‌ಐಎ ನಿರ್ದೋಷಿಗಳು ಎಂದು ಹೇಳಿತು. ವಿಪರ್ಯಾಸವೆಂದರೆ, ಸುಮಾರು 9 ಮಂದಿ ಮುಸ್ಲಿಮ್ ತರುಣರು ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದ ಎನ್‌ಐಎ ಇದೀಗ ತನ್ನ ಹೇಳಿಕೆಯಿಂದ ಜಾರಿಕೊಳ್ಳಲು ಯತ್ನಿಸುತ್ತಿದೆ. ಯಾರನ್ನು ಎನ್‌ಐಎ ಪ್ರಕರಣದಲ್ಲಿ ಭಾಗಿಯಲ್ಲ ಎಂದಿತ್ತೋ ಅವರನ್ನು ದೋಷಮುಕ್ತಿ ಗೊಳಿಸಲು ವಿರೋಧ ಸೂಚಿಸುತ್ತಿವೆ. ಎನ್‌ಐಎಯ ವಿರೋಧಗಳಿಂದ ಎರಡು ಅಪಾಯಗಳಿವೆ. ಒಂದು, ಅಮಾಯಕರೆಂದು ಗೊತ್ತಿದ್ದೂ ಕೆಲವು ರಾಜಕೀಯ ಕಾರಣಗಳ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಜೈಲಿನಲ್ಲಿಟ್ಟು ಅವರ ಬದುಕನ್ನು ನಾಶ ಮಾಡುವುದರಿಂದ ಪರೋಕ್ಷವಾಗಿ ಈ ದೇಶದ ಕಾನೂನು ವ್ಯವಸ್ಥೆಯ ಮೇಲೆ, ಸಂವಿಧಾನದ ಮೇಲೆ ಜನರು ಭರವಸೆ ಕಳೆದುಕೊಳ್ಳಬಹುದು. ಉಗ್ರರನ್ನು ದಮನ ಮಾಡಬೇಕಾದ ಎನ್‌ಐಎ ಈ ಮೂಲಕ ಉಗ್ರರನ್ನು ತಯಾರು ಮಾಡುವ ಕೆಲಸಕ್ಕೆ ಹೊರಟಿದೆ. ಎರಡನೆಯ ಅಪಾಯ, ದೇಶದ ವಿರುದ್ಧ ಸ್ಫೋಟ ನಡೆಸಿ ನೂರಾರು ಜನರ ಸಾವು ನೋವಿಗೆ ಕಾರಣರಾದ ಆರೋಪಿಗಳು ರಕ್ಷಿಸಲ್ಪಡಬಹುದು. ನ್ಯಾಯಾಲಯವನ್ನು ಗೊಂದಲಕ್ಕೆ ಕೆಡವಿ, ಕೇಸರಿ ಉಗ್ರರನ್ನು ರಕ್ಷಿಸುವ ದುರುದ್ದೇಶವೂ ಎನ್‌ಐಎಗೆ ಇದ್ದಂತಿದೆ. ಎನ್‌ಐಎ ಸರಕಾರದ ಮೂಗಿನ ನೇರಕ್ಕೆ ಕೆಲಸ ಮಾಡಲು ಮುಂದಾಗಿದೆ ಮತ್ತು ತನಿಖೆಯ ದಾರಿಯನ್ನು ತಪ್ಪಿಸುವುದಕ್ಕೆ ಯತ್ನ ಮಾಡುತ್ತಿದೆ ಎಂದು ಈ ಹಿಂದೆಯೇ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಆರೋಪಿಸಿದ್ದರು. ಕೇಸರಿ ಉಗ್ರರ ವಿರುದ್ಧ ವಾದ ಮಾಡುವ ಸಂದರ್ಭದಲ್ಲಿ ತುಸು ಮೃದು ನಿಲುವು ತಳೆಯಬೇಕು ಮತ್ತು ಅವರ ಬಿಡುಗಡೆಗೆ ಸಹಕರಿಸಬೇಕು ಎಂದು ಎನ್‌ಐಎ ಅಧಿಕಾರಿಗಳು ತನ್ನನ್ನು ಒತ್ತಾಯಿಸಿದ್ದರು ಎಂಬ ಗಂಭೀರ ಆರೋಪವನ್ನು ಮಾಡಿದ್ದರೂ, ಆ ಆರೋಪದ ಹಿನ್ನೆಲೆಯಲ್ಲಿ ಯಾವ ತನಿಖೆಯೂ ಆಗಿಲ್ಲ. ಸ್ವತಃ ಉಗ್ರರ ಪರವಾಗಿರುವ ಅಧಿಕಾರಿಗಳಿಂದ ಉಗ್ರರ ದಮನವಾಗುತ್ತದೆ ಎಂದು ಭಾವಿಸುವುದೇ ಅತ್ಯಂತ ದೊಡ್ಡ ವಿಡಂಬನೆಯಲ್ಲವೇ? ಇದೀಗ ಎನ್‌ಐಎ ಯೂಟರ್ನ್ ಕುರಿತಂತೆಯೂ ರೋಹಿಣಿ ಸಾಲ್ಯಾನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘‘2006ರ ಮಾಲೆಗಾಂವ್ ಸ್ಫೋಟದ ಹಿಂದೆ ಹಿಂದೂ ತೀವ್ರವಾದಿ ಗುಂಪಿನ ಕೈವಾಡವಿದೆಯೆಂಬುದನ್ನು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆಯೆಂದು ತನಿಖಾಧಿಕಾರಿ ಸುಹಾಸ್‌ವಾರ್ಕೆ ನನಗೆ ತಿಳಿಸಿದ್ದರು’’ ಎಂಬ ಮಾಹಿತಿಯನ್ನು ಅವರು ಹೊರಗೆಡಹಿದ್ದಾರೆ. ಆದರೆ ಇವೆಲ್ಲಕ್ಕೂ ಸರಕಾರ ಮಾತ್ರ ಕಿವುಡನಂತೆ ನಟಿಸುತ್ತಿದೆ. ಅಂದರೆ, ಅದು ಪರೋಕ್ಷವಾಗಿ ಕೇಸರಿ ಉಗ್ರರನ್ನು ರಕ್ಷಿಸಲು ಹೊರಟಿದೆ ಮತ್ತು ಈ ದೇಶದ ಅಲ್ಪಸಂಖ್ಯಾತ ಸಮುದಾಯವನ್ನು ಬಲಿಪಶು ಮಾಡಲು ಹೊರಟಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಉಗ್ರವಾದಕ್ಕೆ ಧರ್ಮವಿಲ್ಲ. ಹಸಿರು ಉಗ್ರವಾದ ಸ್ಫೋಟಿದರೆ ಹಿಂಸೆ, ಕೇಸರಿ ಉಗ್ರವಾದ ಸ್ಫೋಟಿಸಿದರೆ ಅದು ದೇಶಪ್ರೇಮ ಎನ್ನುವ ನಿಲುವು ಈ ದೇಶಕ್ಕೆ ಮುಂದಿನ ದಿನಗಳಲ್ಲಿ ಭಾರೀ ಆಪತ್ತನ್ನು ತಂದೊಡ್ಡಲಿದೆ. ಅಮಾಯಕರನ್ನು ಉಗ್ರವಾದದ ಹೆಸರಲ್ಲಿ ಬಲಿಪಶುಮಾಡುವ ಮೂಲಕ, ಸರಕಾರವೇ ಅವರನ್ನು ಉಗ್ರವಾದದ ಎಡೆಗೆ ತಳ್ಳಿದರೆ ಮಗದೊಂದೆಡೆ ಕೇಸರಿ ಉಗ್ರರನ್ನು ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ಉಗ್ರವಾದಕ್ಕೆ ಕುಮ್ಮಕ್ಕು ನೀಡಲು ಹೊರಟಿದೆ. ಉಗ್ರವಾದದ ಕುರಿತಂತೆ ಇಂತಹದೊಂದು ದ್ವಂದ್ವ ನಿಲುವನ್ನು ಹೊಂದಿರುವ ಸರಕಾರ ವಿಶ್ವಕ್ಕೆ ಉಗ್ರವಾದದ ಬಗ್ಗೆ ಪಾಠ ಮಾಡಿದರೆ, ಅದನ್ನು ಜಗತ್ತು ನಂಬೀತಾದರೂ ಹೇಗೆ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X