ವಿಧಾನಪರಿಷತ್ ಸದಸ್ಯರತ್ತ ಚಪ್ಪಲಿ ಎಸೆದ ಉಪನ್ಯಾಸಕರು
13ನೆ ದಿನಕ್ಕೆ ಕಾಲಿಟ್ಟ ಪಿಯು ಉಪನ್ಯಾಸಕರ ಧರಣಿ

ಬೆಂಗಳೂರು, ಎ.14: ಕುಮಾರ ನಾಯಕ್ ವರದಿ ಜಾರಿಗೆ ಒತ್ತಾಯಿಸಿ ಪಿಯು ಉಪನ್ಯಾಸಕರು ನಡೆಸುತ್ತಿರುವ ಉಪವಾಸವನ್ನು ವಾಪಸ್ ತೆಗೆದುಕೊಳ್ಳುವಂತೆ ಮನವೊಲಿಸಲು ಬಂದಿದ್ದ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್‌ರಿಗೆ ೇರಾವ್ ಹಾಕಿ, ಅವರತ್ತ ಚಪ್ಪಲಿ ಎಸೆದ ಘಟನೆ ನಡೆಯಿತು.
ಮೌಲ್ಯಮಾಪನ ಬಹಿಷ್ಕರಿಸಿ ಬೇಡಿಕೆಗಳ ಈಡೇರಿಕೆ ಗಾಗಿ ಪಿಯು ಉಪನ್ಯಾಸಕರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕಳೆದ 13 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಗುರುವಾರ ಪ್ರತಿಭಟನಾಕಾರರನ್ನು ಮನವೊಲಿಸಲು ವಿಧಾನಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಅರುಣ್ ಡಿ.ಶಹಾಪುರ್, ಸಂಕನೂರ ಮಠ ಹಾಗೂ ಅಮರನಾಥ ಪಾಟೀಲ್ ವೇದಿಕೆಯತ್ತ ಬಂದರು. ಈ ವೇಳೆ ಆಕ್ರೋಶಿತಗೊಂಡ ಉಪನ್ಯಾಸಕರು, ನಿಮ್ಮ ಮಾತು ನಮಗೆ ಬೇಕಾಗಿಲ್ಲ. ಕೂಡಲೇ ಇಲ್ಲಿಂದ ಹೊರಡಿ ಎಂದು ಮಾತನಾಡಲು ಅವಕಾಶ ಕೊಡದೆ ವಾಪಸ್ ಕಳುಹಿಸಿದ ಪ್ರಸಂಗ ನಡೆಯಿತು. ಚಪ್ಪಲಿ ಎಸೆತ: ಉಪನ್ಯಾಸಕರು ೇರಾವ್ ಹಾಕಿದ್ದರಿಂದ ವಿಧಾನಪರಿಷತ್ ಸದಸ್ಯರು ವಾಪಸ್ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯಲ್ಲಿದ್ದವರು ಚಪ್ಪಲಿಯೊಂದನ್ನು ಗಣೇಶ್ ಕಾರ್ಣಿಕ್‌ರತ್ತ ಎಸೆದರು. ಇದಕ್ಕೆ ಯಾವ ಪ್ರತಿಕ್ರಿಯೆಯನ್ನು ನೀಡದೆ ಪರಿಷತ್ ಸದಸ್ಯರು ವಾಪಸ್ ಹೋದರು.
ಚಪ್ಪಲಿ ಎಸೆದಿಲ್ಲ
ಕಳೆದ 13ದಿಂದ ಪ್ರತಿಭಟನಾ ನಡೆಸುತ್ತಿದ್ದರೂ ಸಮಸ್ಯೆಯನ್ನು ಬಗೆಹರಿಸಲು ಯಾವ ಜನಪ್ರತಿನಿಧಿ ಗಳು ಆಸಕ್ತಿ ವಹಿಸುತ್ತಿಲ್ಲ. ಆದರೆ, ಮಾಧ್ಯಮಗಳ ಮುಂದೆ ಕಣ್ಣೊರೆಸುವ ತಂತ್ರಕ್ಕಾಗಿ ಇಲ್ಲಿಗೆ ಬರುತ್ತಿದ್ದಾರೆ. ಹೀಗಾಗಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್‌ರಿಗೆ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಕೊಡಲಿಲ್ಲ. ಅವರು ವಾಪಸ್ ಹೋಗುತ್ತಿದ್ದ ವೇಳೆ ಉಪನ್ಯಾಸಕ ರಲ್ಲದವರು ಚಪ್ಪಲಿ ಎಸೆದಿದ್ದಾರೆ. ಉಪನ್ಯಾಸಕರು ಅಂತಹ ನೀಚ ಕೆಲಸಕ್ಕೆ ಇಳಿಯುವುದಿಲ್ಲ.
-ನಾಗೇಶ್, ಪ್ರತಿಭಟನಾನಿರತ ಉಪನ್ಯಾಸಕ
ಪಿಯು ಉಪನ್ಯಾಸಕರ ನೋವು, ಆಕ್ರೋಶ ನನಗೆ ಅರ್ಥವಾಗುತ್ತದೆ. ಕುಮಾರ ನಾಯಕ್ ವರದಿ ಜಾರಿಗೆ ಒತ್ತಾಯಿಸಿ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರಕಾರ ಸಮಸ್ಯೆಯನ್ನು ಬಗೆಹರಿಸಲು ಆಸಕ್ತಿ ತೋರಿಸುತ್ತಿಲ್ಲ. ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಕೂಡ ಸ್ಪಂದಿಸುತ್ತಿಲ್ಲ. ಹೀಗಾಗಿ ಉಪನ್ಯಾಸಕರು ತಮ್ಮ ಆಕ್ರೋಶವನ್ನು ನನ್ನ ಮೇಲೆ ಚಪ್ಪಲಿ ಎಸೆಯುವ ಮೂಲಕ ಹೊರ ಹಾಕಿದ್ದಾರೆ.
-ಗಣೇಶ್ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ







