ಮಡಿಕೇರಿ: ಗುಂಡೇಟಿಗೆ ಬಸ್ ಚಾಲಕ ಮೃತ್ಯು
ಮಡಿಕೇರಿ, ಎ.14: ಶೂಟೌಟ್ ಪ್ರಕರಣದಲ್ಲಿ ಖಾಸಗಿ ಬಸ್ ಚಾಲಕನೊಬ್ಬ ಮೃತ ಪಟ್ಟಿರುವ ಘಟನೆ ಎ. 13ರ ರಾತ್ರಿ ಸುಮಾರು 9:30ಕ್ಕೆ ಮಡಿಕೇರಿ ಸಮೀಪದ ಅರುವತ್ತೊಕ್ಲು ಗ್ರಾಮದಲ್ಲಿ ನಡೆದಿದೆ.
ರಾಜು ಈರಪ್ಪ(42) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಚೆರಿಯ ಮನೆ ಗಿರೀಶ್ ಎಂಬಾತ ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಮೂಲತಃ ಚೆಯ್ಯಂಡಾಣೆ ನಿವಾಸಿಯಾಗಿರುವ ರಾಜು ತಾನು ಚಲಾಯಿಸುತ್ತಿದ್ದ ಬಸ್‌ನ್ನು ಅದರ ಮಾಲಕರಿರುವ ಅರುವತ್ತೊಕ್ಲು ಗ್ರಾಮದಲ್ಲಿ ನಿಲ್ಲಿಸಲು ಎಂದಿನಂತೆ ತೆರಳಿದ್ದರು. ಬಸ್ ನಿಲ್ಲಿಸಿ 150 ಮೀಟರ್‌ನಷ್ಟು ದೂರ ತೆರಳುತ್ತಿದ್ದಂತೆ ರಾಜುಗೆ ಗುಂಡೇಟು ತಗುಲಿದೆ.
ಗುಂಡಿನ ಶಬ್ದ ಕೇಳಿ ಮಾಲಕರು ಹಾಗೂ ಬಸ್ ಕ್ಲೀನರ್ ಸ್ಥಳಕ್ಕೆ ಆಗಮಿಸಿದಾಗ, ರಾಜು ಸ್ಥಳದಲ್ಲೆ ಮೃತಪಟ್ಟಿರುವುದು ಗೋಚರಿಸಿತು. ನಂತರ ವಿಷಯ ತಿಳಿದ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ತಡವಾಗಿ ಮಾಹಿತಿ ನೀಡಿದ ಕಾರಣಕ್ಕಾಗಿ ಮಾಲಕರು ಮತ್ತು ಕ್ಲೀನರ್‌ನನ್ನು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಮುಂದಾದರು ಎನ್ನಲಾಗಿದೆ.
ಈ ಸಂದರ್ಭ ಕ್ಲೀನರ್, ಚೆರಿಯಮನೆ ಗಿರೀಶ್ ಎಂಬಾತ ಗುಂಡು ಹಾರಿಸಿರುವುದಾಗಿ ಗ್ರಾಮಸ್ಥರಿಗೆ ತಿಳಿಸಿದರೆಂದು ಹೇಳಲಾಗಿದೆ.
ಸ್ಥಳಕ್ಕೆ ಮಡಿಕೆೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಕರೀಂ ರಾವುತರ್ ಹಾಗೂ ಠಾಣಾಧಿಕಾರಿ ಶಿವಪ್ರಕಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚೆರಿಯಮನೆ ಗಿರೀಶ್ ಎಂಬಾತನನ್ನು ಬಂಧಿಸಲು ವಿಶೇಷ ತಂಡ ರಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ರಾಜು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಖಾಸಗಿ ಬಸ್‌ಗಳ ಪ್ರತಿಭಟನೆ: ಚಾಲಕ ರಾಜು ಈರಪ್ಪ ಹತ್ಯೆ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲೆಯ ಎಲ್ಲಾ ಖಾಸಗಿ ಬಸ್‌ಗಳ ಚಾಲಕರು ಮತ್ತು ಕಾರ್ಮಿಕರು ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು. ತಕ್ಷಣ ಆರೋಪಿ ಚೆರಿಯಮನೆ ಗಿರೀಶ್‌ನನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಮೃತ ರಾಜು ಮನೆಯವರಿಗೆ ತಡವಾಗಿ ವಿಷಯ ತಿಳಿಸಿದ ಬಸ್ ಮಾಲಕರ ಕ್ರಮವನ್ನು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು. ಖಾಸಗಿ ಬಸ್‌ಗಳ ಸ್ಥಗಿತದಿಂದ ಪ್ರಯಾಣಿಕರು ಪರದಾಡುವಂತಾಯಿತು.
ಮೃತ ಚಾಲಕ ರಾಜು ಪತ್ನಿ ಶಾಂತಿ ಅವರು ನರಿಯಂದಡ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಪೂರ್ವಯೋಜಿತ ಕೃತ್ಯವೆಂದು ಆರೋಪಿಸಿದರು. ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ಅವರು ಒತ್ತಾಯಿಸಿದರು.





