ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿಎಸ್‌ವೈ ಪದಗ್ರಹಣ

ಬೆಂಗಳೂರು, ಎ.14: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ತನ್ನ ಪ್ರಮುಖ ಗುರಿ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಗುರುವಾರ ನಗರದ ಅರಮನೆ ಮೈದಾನದಲ್ಲಿನ ಗಾಯತ್ರಿ ವಿಹಾರದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಹ್ಲಾದ್‌ಜೋಶಿಯಿಂದ ಪಕ್ಷದ ಬಾವುಟವನ್ನು ಸ್ವೀಕರಿಸುವ ಮೂಲಕ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿ ಅವರು ಮಾತನಾಡಿದರು.
ಪಕ್ಷದ ಸಂಘಟನೆ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವುದಿಲ್ಲ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುತ್ತೇನೆ. ಯಾವುದೇ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲ. ಯಾರಾದರೂ ಗೊಂದಲ ನಿರ್ಮಾಣ ಮಾಡಲು ಮುಂದಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಸಂಘಟನೆ, ಹೋರಾಟದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. 9 ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ. 13 ಜಿಲ್ಲೆಗಳಲ್ಲಿ ಕೇವಲ ಒಬ್ಬೊಬ್ಬ ಶಾಸಕರಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಾದರೆ ಕಾರ್ಯಕರ್ತರು ಮುಂದಿನ ಎರಡು ವರ್ಷಗಳ ಕಾಲ ಹಗಲು ರಾತ್ರಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಹೋಬಳಿ, ತಾಲೂಕು, ವಿಧಾನಸಭಾ ಕ್ಷೇತ್ರ, ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ನಾಯಕತ್ವ ಬಲವರ್ಧನೆಗೆ ಆದ್ಯತೆ ನೀಡಲಾಗು ವುದು. 224 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಜನರು ಬಯಸಿದವರನ್ನು ಅಭ್ಯರ್ಥಿ ಹಾಗೂ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು. ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ಆಶ್ರಯವಾಗಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರಕಾರ ಸ್ಥಗಿತ ಗೊಳಿಸಿದೆ. ಭಾಗ್ಯಲಕ್ಷ್ಮಿಗೆ ಅರ್ಹರಾಗಿರುವವರನ್ನು ಗುರುತಿಸಿ ಅವರಿಗೆ ಸೌಲಭ್ಯ ಒದಗಿಸಲು ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ನಿಕಟಪೂರ್ವ ಅಧ್ಯಕ್ಷ ಪ್ರಹ್ಲಾದ್ ಜೋಶಿ, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಕೇಂದ್ರ ಸಚಿವರಾದ ಅನಂತ್‌ಕುಮಾರ್, ಜಿ.ಎಂ.ಸಿದ್ದೇಶ್ವರ್, ಸಂಸದರಾದ ಶೋಭಾ ಕರಂದ್ಲಾಜೆ, ಶ್ರೀರಾಮುಲು, ನಳಿನ್‌ಕುಮಾರ್ ಕಟೀಲ್, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಉಪನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಗೋವಿಂದಕಾರಜೋಳ, ಸುರೇಶ್‌ಕುಮಾರ್, ಉಮೇಶ್‌ಕತ್ತಿ, ರಾಜ್ಯಸಭಾ ಸದಸ್ಯ ಪ್ರಭಾಕರ್‌ಕೋರೆ ಮತ್ತಿತರರು ಉಪಸ್ಥಿತರಿದ್ದರು.







