ದಲಿತರ ಮತಕ್ಕಾಗಿ ಬಿಜೆಪಿಯಿಂದ ಅಂಬೇಡ್ಕರ್ ಜನ್ಮದಿನ: ಮಾರಸಂದ್ರ
‘ವಿಶ್ವ ವಿಜ್ಞಾನದ ದಿನ’ ಸಮಾರಂಭ

ಬೆಂಗಳೂರು, ಎ. 14: ಬಿಜೆಪಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಹುಟ್ಟುಹಬ್ಬ ಮಾಡುವ ಮೂಲಕ ದಲಿತರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದೆ ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ಗುರುವಾರ ನಗರದ ಬಹುಜನ ಸಮಾಜ ಪಾರ್ಟಿ ಮುಖ್ಯ ಕಚೇರಿಯಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮದಿನಾಚರಣೆ ಅಂಗವಾಗಿ ‘ವಿಶ್ವ ಜ್ಞಾನದ ದಿನ’ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ 95 ಕೋಟಿ ಜನರ ಬಿಡುಗಡೆಗಾಗಿ ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇವಲ ಒಂದು ವರ್ಗದ ದಲಿತ ನಾಯಕ ಎನ್ನುವ ರೀತಿ ಸೀಮಿತವಾಗಿ ಚಿತ್ರಿಸಲಾಗುತ್ತಿದೆ. ಅಲ್ಲದೆ, ಕಾಂಗ್ರೆಸ್ ಪಕ್ಷ ಬೆಂಕಿ ಉಗುಳುವ ಮನೆ ಎಂದು ಅಂಬೇಡ್ಕರ್ ಎಚ್ಚರಿಕೆ ನೀಡಿದ್ದರೂ•ಸಹ ಇಂದಿಗೂ ಬಹುಜನರನ್ನು ವಂಚಿಸಿ ಮತ ಪಡೆಯುತ್ತಿದೆ. ಇದೀಗ ಬಿಜೆಪಿಯು ಕೂಡ ಡಾ.ಅಂಬೇಡ್ಕರ್ ಅವರ ಹುಟ್ಟು ಹಬ್ಬ ಆಚರಿಸುವ ಮೂಲಕ ದಲಿತರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದೆ ಎಂದು ಹೇಳಿದರು.
1848ರಲ್ಲಿ ಮಹಾತ್ಮ ಜ್ಯೋತಿ ಬಾಫುಲೆ, ಸಾವಿತ್ರಿ ಬಾಯಿ ಫುಲೆ ಅವರನ್ನು ಅವಮಾನಿಸಿದ್ದಲ್ಲದೆ, ದಲಿತ ವಿರೋಧಿ ನೀತಿಗಳನ್ನು ಜಾರಿ ಮಾಡಿದ ಪಕ್ಷ ಇಂದು ಅಂಬೇಡ್ಕರ್ ಅವರ ಜನ್ಮ ದಿನ ಆಚರಿಸುತ್ತಿರುವುದು ವಿಪರ್ಯಾಸ ಎಂದ ಅವರು, ದಲಿತರು ಮತ್ತು ಅಲ್ಪಸಂಖ್ಯಾತರು ಒಂದಾಗಬೇಕು. ಆಗ ಮಾತ್ರ ರಾಜಕೀಯ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆರ್.ಮುನಿಯಪ್ಪ, ಆರ್.ಚಂಗಪ್ಪ, ಹೆಣ್ಣೂರು ಲಕ್ಷ್ಮೀನಾರಾಯಣ, ನಹೀದಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.





