‘ಮಂಡ್ಯ’ ಪ್ರೇಮ ವಿವಾಹಕ್ಕೆ ಅಡ್ಡಿ" ದೇವೇಗೌಡ ಖಂಡನೆ

ಬೆಂಗಳೂರು, ಎ.14: ಮಂಡ್ಯದಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಮ್ ಯುವಕನ ಪ್ರೇಮ ವಿವಾಹಕ್ಕೆ ಅಡ್ಡಿಪಡಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತರ ಕ್ರಮವನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರವಾಗಿ ಖಂಡಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಸ್ಪರ ಬೇರೆ ಬೇರೆ ಧರ್ಮಗಳನ್ನು ಅನುಸರಿಸುತ್ತಿರುವ ಯುವಕ ಹಾಗೂ ಯುವತಿಯ ವಿವಾಹಕ್ಕೆ ಅವರ ಪೋಷಕರೇ ಒಪ್ಪಿಗೆ ಸೂಚಿಸಿರುವಾಗ, ಕೆಲವು ಸಂಘಟನೆಗಳ ಕಾರ್ಯಕರ್ತರು ಅದನ್ನು ಅಡ್ಡಿಪಡಿಸುವುದು ಸರಿಯಲ್ಲ ಎಂದರು.
ಜೆಡಿಎಸ್ ಶಾಸಕ ಇಕ್ಬಾಲ್ ಅನ್ಸಾರಿ ಬಿಜೆಪಿ ಸೇರ್ಪಡೆಯಾಗುವ ಸಂಬಂಧ ಎದ್ದಿರುವ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇಕ್ಬಾಲ್ ಅನ್ಸಾರಿ ಜೆಡಿಎಸ್‌ನಲ್ಲಿದ್ದುಕೊಂಡು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದರು. ಇದೀಗ ಕಾಂಗ್ರೆಸ್ ಬಗ್ಗೆ ತಿರಸ್ಕಾರ ಮನೋಭಾವನೆಯಿಟ್ಟುಕೊಂಡು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರಬಹುದು ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎ.16ರಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಪಕ್ಷದಲ್ಲಿ ಕೆಲವು ಗೊಂದಲಗಳು ಇರುವುದು ನಿಜ. ಆದರೆ, ಎಲ್ಲವನ್ನೂ ಚರ್ಚೆ ಮೂಲಕ ಬಗೆಹರಿಸಿಕೊಳ್ಳಲಾಗುವುದು. ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ಶಾಸಕರು ಪಾಲ್ಗೊಳ್ಳುವ ವಿಶ್ವಾಸವಿದೆ. ಸಾಧ್ಯವಾದರೆ ತಾನೂ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ದೇವೇಗೌಡ ಹೇಳಿದರು.
ಜೆಡಿಎಸ್ ಶಾಸಕರು ಬಿಜೆಪಿ ಸೇರ್ಪಡೆಯಾಗುವ ಸುದ್ದಿಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂಬ ನಂಬಿಕೆಯಿದೆ. ನಾನು ಆಶಾ ವಾದಿ, ನಿರಾಶಾವಾದಿಯಲ್ಲ ಎಂದು ದೇವೇಗೌಡ ತಿಳಿಸಿದರು.





