ಪರ್ಕಳ ಪರಿಸರದಲ್ಲಿ ಮುಂದುವರಿದ ಚಿರತೆ ದಾಳಿ
ದನ, ನಾಯಿಗಳು ಬಲಿ, ಚಿರತೆ ಸೆರೆ ಹಿಡಿಯಲು ಹರಸಾಹಸ

ಉಡುಪಿ, ಎ.14: ಪರ್ಕಳ ದೇವಿನಗರದ ಪರಿಸರದಲ್ಲಿ ಕಳೆದ ಕೆಲ ದಿನಗಳಿಂದ ಕಂಡು ಬರುತ್ತಿರುವ ಚಿರತೆ ಹಾವಳಿ ಇಂದು ಕೂಡಾ ಮುಂದುವರಿದಿದ್ದು, ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ದೇವಿನಗರ ಒಂದನೆ ಮುಖ್ಯ ರಸ್ತೆಯಲ್ಲಿ ಚಿರತೆ ದನವೊಂದನ್ನು ಬಲಿ ತೆಗೆದುಕೊಂಡಿದೆ. ದೇವಿನಗರದ 1ನೆ ಮುಖ್ಯ ರಸ್ತೆಯಲ್ಲಿರುವ ಶ್ಯಾಮಲಾ ಶೆಟ್ಟಿ ಎಂಬವರ ಮನೆಯ ಗೇಟ್ ಬಳಿ ಇಂದು ನಸುಕಿನ ವೇಳೆ 3 ಗಂಟೆ ಸುಮಾರಿಗೆ ಚಿರತೆಯ ದಾಳಿಯಿಂದ ಬೀಡಾಡಿ ದನವೊಂದು ಸತ್ತು ಬಿದ್ದಿರುವುದು ಕಂಡುಬಂದಿದೆ.
ಕೂಡಲೇ ಸ್ಥಳೀಯ ಗ್ರಾಪಂ ಸದಸ್ಯ ರವೀಂದ್ರ ಕಾಮತ್, ಸ್ಥಳೀಯರಾದ ಅನಂತರಾಮ್ ಭಟ್, ನಾಗರಾಜ್ ಪೈ, ಅರಣ್ಯ ಇಲಾಖೆಯ ವನಪಾಲಕ ಗಣಪತಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸತ್ತ ದನದ ಮಾಂಸವನ್ನು ಕೊಂಡೊಯ್ದು ಚಿರತೆಯನ್ನು ಸೆರೆ ಹಿಡಿಯಲು ಇರಿಸಲಾದ ಬೋನಿನಲ್ಲಿ ಇಡಲಾಯಿತು. 10 ದಿನಗಳಿಂದೀಚೆ ದೇವಿನಗರ ಪರಿಸರದಲ್ಲಿ ಬೀಡುಬಿಟ್ಟಿರುವ ಚಿರತೆ ಈವರೆಗೆ ನಾಲ್ಕೈದು ನಾಯಿ ಹಾಗೂ ಒಂದು ಕರುವನ್ನು ಬಲಿ ತೆಗೆದುಕೊಂಡಿದೆ. ಈ ಪರಿಸರದಲ್ಲಿ ನಾಲ್ಕೈದು ಬಾರಿ ಪ್ರತ್ಯಕ್ಷಗೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕೆಲವು ದಿನಗಳಿಂದ ರಾತ್ರಿ ಹಗಲು ಹರಸಾಹಸ ಪಡುತ್ತಿದೆ. ಇದೀಗ ಚಿರತೆಯ ದಾಳಿಯಿಂದ ಸ್ಥಳೀಯ ಜನಭಯಭೀತರಾಗಿದ್ದು, ರಾತ್ರಿ ಹೊತ್ತು ನಡೆದಾಡಲು ಭಯಪಡುತ್ತಿದ್ದಾರೆ. ಸೆರೆಗೆ 2 ಬೋನು: ಚಿರತೆಯನ್ನು ಸೆರೆ ಹಿಡಿಯಲು ಈ ಹಿಂದೆ ಒಂದು ಬೋನನ್ನು ಇರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಇನ್ನೊಂದು ಬೋನನ್ನು ಇರಿಸ ಲಾಗಿದೆ. ವಾರದ ಹಿಂದೆ ಹಾಗೂ ಎ.12ರಂದು ಚಿರತೆಯನ್ನು ರಾತ್ರಿ ವೇಳೆ ನಾವು ಕಂಡಿದ್ದೇವೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ರಮೇಶ್ ತಿಳಿಸಿದ್ದಾರೆ.
ಈ ಚಿರತೆಗೆ ಮನುಷ್ಯರ ಭಯವಿಲ್ಲದಂತೆ ಕಾಣುತ್ತಿದೆ. ಇದು ಅಪಾಯಕಾರಿಯಾಗಿದ್ದು, ಇದನ್ನು ಸೆರೆಹಿಡಿಯಲು ಅರವಳಿಕೆ ತಜ್ಞರನ್ನು ಕರೆಸಲು ನಿರ್ಧರಿಸಲಾಗಿದೆ. ಅವರಿಂದ ಶೂಟ್ ಮಾಡಿಸಿ ಚಿರತೆಯನ್ನು ಸೆರೆ ಹಿಡಿಯಲಾಗುವುದು. 10 ದಿನಗಳಿಂದ ರಾತ್ರಿ ಹಗಲು ಇಲಾಖೆಯ ಐವರು ಸಿಬ್ಬಂದಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಅಗತ್ಯ ಬಿದ್ದರೆ ಬೇರೆ ಕಡೆಯಿಂದ ಸಿಬ್ಬಂದಿಯನ್ನು ಕರೆಸಲಾಗುವುದು ಎಂದು ಅವರು ಪತ್ರಿಕೆಗೆ ತಿಳಿಸಿದರು.





