‘ಆರ್ಟ್ ಆಫ್ ಲಿವಿಂಗ್’ನಿಂದ ಅಕ್ರಮವಾಗಿ ದಲಿತರ ಭೂಮಿ ವಶ: ಆರೋಪ

ಬೆಂಗಳೂರು, ಎ.14: ಬೆಂಗಳೂರು ಉತ್ತರ ತಾಲೂಕಿನ ಇಟ್ಟಗಾಲಪುರ ಗ್ರಾಮದ ಸರ್ವೆ ನಂ. 27(30ವೈ) ಸೇರಿದ ದಲಿತ ಸಮುದಾಯದ 2 ಎಕರೆ ಭೂಮಿಯನ್ನು ಅಕ್ರಮ ದಾಖಲೆಗಳನ್ನು ಸೃಷ್ಟಿಸಿಕೊಂಡು ಆರ್ಟ್ ಆಫ್ ಲಿವಿಂಗ್ ಆಶ್ರಮ ಆಕ್ರಮಿಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಗಿರೀಶ್‌ಗೌಡ ಆರೋಪಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುರ್ವೇದ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆಂದು 2 ವರ್ಷಗಳ ಹಿಂದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ದಲಿತರಿಗೆ ಸೇರಿದ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಇದರಿಂದ ದಲಿತ ಕುಟುಂಬ ಬೀದಿಗೆ ಬಂದಿದೆ ಎಂದು ಹೇಳಿದರು.
ಈ ಕುಟುಂಬದವರು ಆ ಭೂಮಿಯಲ್ಲಿ ಕೃಷಿ ಮಾಡಲಿಕ್ಕೆ ಹೋದಾಗ ಆರ್ಟ್ ಆಫ್ ಲಿವಿಂಗ್, ಅಲ್ಲಿನ ಕೆಲವು ಪುಢಾರಿಗಳನ್ನು ಬಳಸಿಕೊಂಡು ದೌರ್ಜನ್ಯ ನಡೆಸುತ್ತಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ, ಸ್ವೀಕರಿಸದಂತೆ ರಾಜಕಾರಣಿಗಳನ್ನು ಬಳಸಿಕೊಂಡು ಕುತಂತ್ರ ಮಾಡಲಾಗುತ್ತಿದೆ. ಪೊಲೀಸರನ್ನೇ ಬಳಸಿಕೊಂಡು ದಲಿತರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ತಿಳಿಸಿದರು.
ದಲಿತ ಕುಟುಂಬದವರು ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಭೂಮಿಯನ್ನು ನಮಗೆ ನೀಡಲಿಲ್ಲ ಎಂದಾದರೆ ನಾವು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಮುಂದಿನ 15 ದಿನಗಳೊಳಗೆ ಆರ್ಟ್ ಆಫ್ ಲಿವಿಂಗ್ ಆಶ್ರಮ ಗೊಂದಲಗಳನ್ನು ನಿವಾರಿಸಿ ಆಕ್ರಮಿಸಿಕೊಂಡಿರುವ ದಲಿತರ ಭೂಮಿಯನ್ನು ವಾಪಸು ನೀಡಬೇಕು, ಇಲ್ಲವಾದರೆ ಆಶ್ರಮಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಗೌಡ ಎಚ್ಚರಿಕೆ ನೀಡಿದ್ದಾರೆ.







