ಹಿಂದುತ್ವದಿಂದ ರೋಹಿತ್ ಕುಟುಂಬಕ್ಕೆ ಆಝಾದಿ!: ತಾಯಿ, ಸೋದರ ಬೌದ್ಧಧರ್ಮಕ್ಕೆ

ಮುಂಬೈ,ಎ.14: ಆತ್ಮಹತ್ಯೆಗೆ ಶರಣಾದ ಹೈದರಾಬಾದ್ ವಿ.ವಿ.ಯ ದಲಿತಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ತಾಯಿ ರಾಧಿಕಾ ಹಾಗೂ ಸಹೋದರ ನಾಗಾ ಚೈತನ್ಯ ವೇಮುಲಾ ಗುರುವಾರ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ಜನ್ಮದಿನಾಚರಣೆಯ ದಿನದಂದು ಮುಂಬೈನ ದಾದರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಬೌದ್ಧಧರ್ಮ ದೀಕ್ಷೆ ಸ್ವೀಕರಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂವಿಧಾನದ ಶಿಲ್ಪಿ ಹಾಗೂ ದಲಿತ ಹೋರಾಟಗಾರ ಬಿ.ಆರ್.ಅಂಬೇಡ್ಕರ್ ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯನ್ನು ವಿರೋಧಿಸಿ 1956ರಲ್ಲಿ ನಾಗಪುರದಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಕಾರ್ಯಕ್ರಮದಲ್ಲಿ ನಾಗಾ ಚೈತನ್ಯ ವೇಮುಲಾ ಮಾತನಾಡುತ್ತಾ, ‘‘ನನ್ನ ಸಹೋದರ ರೋಹಿತ್, ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳದಿದ್ದರೂ, ಆತ ಹೃದಯಾಂತರಾಳದಲ್ಲಿ ಬೌದ್ಧನಾಗಿದ್ದನು.
ದಲಿತನೆಂಬ ಏಕೈಕ ಕಾರಣಕ್ಕೆ ತಾರತಮ್ಯ ಮಾಡಿದ್ದಕ್ಕಾಗಿ ಆತ ತನ್ನ ಬದುಕನ್ನು ಕೊನೆಗೊಳಿಸಿದ. ಆತನ ಅಂತ್ಯಕ್ರಿಯೆಗಳನ್ನು ಬೌದ್ಧ ಸಂಪ್ರದಾಯದಂತೆ ನಿರ್ವಹಿಸಿದ್ದೇವೆ’’ ಎಂದು ರಾಜಾ ವೇಮುಲಾ ಎಂದೂ ಕರೆಯಲ್ಪಡುವ ನಾಗಾ ಚೈತನ್ಯ ತಿಳಿಸಿದ್ದಾರೆ.
ಹಿಂದೂಧರ್ಮದಲ್ಲಿನ ಜಾತಿ ಪದ್ಧತಿಯನ್ನು ನಾವು ವಿರೋಧಿಸುತ್ತೇವೆ. ಬೌದ್ಧಧರ್ಮದಲ್ಲಿ ಜಾತಿಗಳ ಶೋಷಣೆಯ ವ್ಯವಸ್ಥೆ ಇಲ್ಲದಿರುವುದರಿಂದ ನಾವು ಬೌದ್ಧ ಧರ್ಮವನ್ನು ಸ್ವೀಕರಿಸಲು ನಿರ್ಧರಿಸಿದ್ದೇವೆ’’ ಎಂದು ನಾಗಾ ಚೈತನ್ಯ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಕಾಶ್ ಅಂಬೇಡ್ಕರ್ ಮಾತನಾಡಿ, ತಾನು ಇತ್ತೀಚೆಗೆ ಹೈದರಾಬಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಧಿಕಾ ವೇಮುಲಾ ತನ್ನನ್ನು ಸಂಪರ್ಕಿಸಿ, ಪುತ್ರನೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತೆಂದು ತಿಳಿಸಿದ್ದಾರೆ. ಆದರೆ ವಿವಾಹಿತರಾಗಿರುವ ರೋಹಿತ್‌ರ ಹಿರಿಯ ಸಹೋದರಿ ಬೌದ್ಧ ಧರ್ಮಕ್ಕೆಮತಾಂತರಗೊಂಡಿಲ್ಲ.
ರೋಹಿತ್‌ಗೆ ಬೌದ್ಧ ಧರ್ಮದ ಬಗ್ಗೆ ಸಾಕಷ್ಟು ಒಲವಿತ್ತು.ಹೈದರಾಬಾದ್ ವಿವಿಯ ಕ್ಯಾಂಪಸ್‌ನಲ್ಲಿ ದಲಿತರ ಮೇಲೆ ಯಾವ ರೀತಿ ತಾರತಮ್ಯ ಎಸಗಲಾಗುತ್ತದೆ ಎಂಬ ಬಗ್ಗೆ ಅವರು ಉಪಕುಲಪತಿಗೆ ಪತ್ರ ಸಹ ಬರೆದಿದ್ದರು. ಬೌದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ನಾವು ರೋಹಿತ್‌ನನ್ನು ಗೌರವಿಸಬೇಕೆಂದು ನನ್ನ ತಾಯಿ ಭಾವಿಸಿದ್ದಾರೆ.
- ನಾಗಾ ಚೈತ್ಯ ವೇಮುಲಾ, ರೋಹಿತ್ ಸಹೋದರ







