ಮೌಲ್ಯಮಾಪನಕ್ಕೆ ಹಾಜರಾಗಲು ಉಪನ್ಯಾಸಕರಿಗೆ ನೋಟಿಸ್

ಬೆಂಗಳೂರು, ಎ.14: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹಾಜರಾಗುವಂತೆ ಅಧಿಕಾರಿಗಳ ಮೂಲಕ ಉಪನ್ಯಾಸಕರಿಗೆ ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.
ಗುರುವಾರ ಇಲ್ಲಿನ ಮಲ್ಲೇಶ್ವರಂ ಪದವಿಪೂರ್ವ ಶಿಕ್ಷಣ ಮಂಡಳಿಯ ಕಚೇರಿಯಲ್ಲಿ ಉಪನ್ಯಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಉಪನ್ಯಾಸಕರು ಮೌಲ್ಯಮಾಪನಕ್ಕೆ ಹಾಜರಾಗುವ ಭರವಸೆಯಿದೆ. ಹೀಗಾಗಿ ಎಸ್ಮಾ ಜಾರಿ ಪ್ರಸ್ತಾವ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಮೌಲ್ಯಮಾಪನ ಪ್ರಕ್ರಿಯೆ ಹೇಗೆ ನಡೆಸಬೇಕೆಂದು ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಸಮರ್ಥ ಶಿಕ್ಷಕರಿಂದಲೇ ಮೌಲ್ಯಮಾಪನ ಮಾಡಿಸಲಾಗುವುದು. ಆದರೆ, ಯಾರಿಂದ ಮಾಡಿಸಲಾಗುವುದು ಎಂಬ ವಿಚಾರವನ್ನು ಗೌಪ್ಯವಾಗಿಡಲಾಗುವುದು ಎಂದು ಕಿಮ್ಮನೆ ತಿಳಿಸಿದರು.
ಪಿಯು ಉಪನ್ಯಾಸಕರು ವೇತನಭತ್ತೆ ಮತ್ತು ಗೌರವಧನ ಹೆಚ್ಚಳಕ್ಕೆ ಮನವಿ ಮಾಡಿದ್ದರು. ಆದರೆ, ಇದು ರಾಜ್ಯ ಸರಕಾರಕ್ಕೆ ಹೊರೆಯಾಗುತ್ತದೆ. ಪದವಿ ಪೂರ್ವ ಉಪನ್ಯಾಸಕರ ವೇತನ ತಾರತಮ್ಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸರಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದರು.
ಪದವಿ ಪೂರ್ವ ಉಪನ್ಯಾಸಕರು ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಒಂದು ವೇತನ ಭತ್ತೆ ಹಾಗೂ ಗೌರವ ಧನ ಮುಂದುವರಿಸುವ ಬಗ್ಗೆ ರಾಜ್ಯ ಸರಕಾರ ನಿರ್ಧರಿಸಿದೆ ಎಂದ ಅವರು, ಉಪನ್ಯಾಸಕರು ಈ ತೀರ್ಮಾನವನ್ನು ಒಪ್ಪದಿದ್ದರೆ ನೋಟಿಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿದರು.
125 ಕೋಟಿ ರೂ.ಹೊರೆ: ಉಪನ್ಯಾಸಕರು ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ವೇತನಭತ್ತೆ ಹೆಚ್ಚಳ ಹಾಗೂ ಗೌರವಧನ ನೀಡುವುದರಿಂದ ರಾಜ್ಯ ಸರಕಾರಕ್ಕೆ 125 ಕೋಟಿ ರೂ.ಹೊರೆಯಾಗಲಿದೆ ಎಂದು ಕಿಮ್ಮನೆ ರತ್ನಾಕರ ಇದೇ ವೇಳೆ ಮಾಹಿತಿ ನೀಡಿದರು.
ಉಪನ್ಯಾಸಕರಿಗೆ ವಿದ್ಯಾರ್ಥಿ-ಪೋಷಕರ ಹಿತದೃಷ್ಟಿ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಉದ್ದೇಶ ಸರಕಾರಕ್ಕಿಲ್ಲ. ಮುಷ್ಕರ ಕೈಬಿಟ್ಟು ಮೌಲ್ಯಮಾಪನಕ್ಕೆ ಹಾಜರಾಗುವ ನಿರೀಕ್ಷೆಯಿದೆ ಎಂದು ಸಚಿವರು ಪುನರುಚ್ಚರಿಸಿದರು.
ಎಸೆಸೆಲ್ಸಿ ವೌಲ್ಯಮಾಪನ ನಿರಾಳ
ಎಸೆಸೆಲ್ಸಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಪ್ರೌಢ ಶಾಲಾ ಶಿಕ್ಷಕರ ಸಂಘ ಸಮ್ಮತಿಸಿದ್ದು, ಅವರಿಗೆ ವೇತನ ಭತ್ತೆ ಹೆಚ್ಚಳ ಮತ್ತು 400 ರೂ.ಗೌರವಧನಕ್ಕೆ ಒಪ್ಪಿದ್ದು, ಎ.15ರಿಂದಲೇ ಮೌಲ್ಯ ಮಾಪನ ಕಾರ್ಯಕ್ಕೆ ಶಿಕ್ಷಕರು ಹಾಜರಾಗಲಿದ್ದಾರೆ.
-ಕಿಮ್ಮನೆ ರತ್ನಾಕರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ







