ಒಡಿಶಾದಲ್ಲಿ ಉಷ್ಣಮಾರುತಕ್ಕೆ 30 ಬಲಿ
ದೇಶಾದ್ಯಂತ ಹೆಚ್ಚಲಿದೆ ಬಿಸಿಲ ಝಳ

ಹೊಸದಿಲ್ಲಿ, ಎ.14: ಒಡಿಶಾದಲ್ಲಿ ಕಳೆದ ವಾರ ಸುಮಾರು 30 ಜನರು ಉಷ್ಣಮಾರುತಕ್ಕೆ ಬಲಿಯಾಗಿದ್ದಾರೆ. ಇತರ ಹಲವಾರು ರಾಜ್ಯಗಳೂ ಬಿಸಿಲಿನ ತೀವ್ರ ತಾಪವನ್ನೆದುರಿಸುತ್ತಿದ್ದು, ತೆಲಂಗಾಣದಲ್ಲಿ ಕಳೆದ ಕೆಲವು ದಿನಗಳಲ್ಲಿ ಬಿಸಿಲ ತಾಪವನ್ನು ತಾಳಲಾಗದೇ 35 ಜನರು ಸಾವನ್ನಪ್ಪಿದ್ದಾರೆ. ಇದು ಕಳೆದ ಐದು ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು ತಾಪಮಾನದ ಎಪ್ರಿಲ್ ತಿಂಗಳು ಆಗಿದೆ ಎಂದು ಹೇಳಿರುವ ಹವಾಮಾನ ಇಲಾಖೆಯು,ಬೇಸಿಗೆಯು ತೀವ್ರಗೊಂಡಂತೆ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ಎಚ್ಚರಿಕೆಯನ್ನು ನೀಡಿದೆ.
ಬಿರುಬಿಸಿಲಿನ ತಾಪದೊಂದಿಗೆ ದೇಶಾದ್ಯಂತ ತೀವ್ರ ಬರ ಮತ್ತು ನೀರಿನ ಭಾರೀ ಅಭಾವ ಜನತೆಯ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿವೆ.
ದೇಶದ 91 ಪ್ರಮುಖ ಜಲಾಶಯಗಳಲ್ಲಿನ ನೀರಿನ ಮಟ್ಟ ಸುಮಾರು ಶೇ.23ಕ್ಕೆ ಕುಸಿದಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠವಾಗಿದೆ ಎಂದು ಸರಕಾರವು ಹೇಳಿದೆ.
ಒಡಿಶಾದಲ್ಲಿ ಹಲವೆಡೆಗಳಲ್ಲಿ ತಾಪಮಾನ 40 ಡಿ.ಸೆ.ಗಿಂತಲೂ ಅಧಿಕವಾಗಿದೆ. ರಾಜ್ಯ ರಾಜಧಾನಿ ಭುವನೇಶ್ವರವು ಈ ವಾರದಲ್ಲಿ ಈಗಾಗಲೇ 45 ಡಿ.ಸೆ.ಉಷ್ಣತೆಯಲ್ಲಿ ಕುದಿಯುತ್ತಿದೆ.
ಒಡಿಶಾ ಸರಕಾರವು ಎ.20ರವರೆಗೆ ರಾಜ್ಯದಲ್ಲಿಯ ಎಲ್ಲ ಶಾಲೆಗಳಿಗೆ ರಜೆಯನ್ನು ಘೋಷಿಸಿದೆ. ಜನರಿಗೆ ಕುಡಿಯುವ ನೀರು ಲಭ್ಯವಾಗುವಂತೆ ನೋಡಿಕೊಳ್ಳಲು ಎಂಜಿನಿಯರ್‌ಗಳು ಮತ್ತು ಸಿಬ್ಬಂದಿ ಸೂಚಿಸಲಾಗಿದೆ.
ತೆಲಂಗಾಣ ಸರಕಾರವು ರಾಜಧಾನಿ ಹೈದರಾಬಾದ್ ಮತ್ತು ಇತರ ಹಲವಾರು ಸ್ಥಳಗಳಲ್ಲಿ ಗುರುವಾರ ಮತ್ತು ಶುಕ್ರವಾರ ಉಷ್ಣ ಮಾರುತದ ಎಚ್ಚರಿಕೆಯನ್ನು ಹೊರಡಿಸಿದೆ.
ಮಹಾರಾಷ್ಟ್ರ ಮತ್ತು ಪ.ಬಂಗಾಲದ ಗಂಗಾನದಿ ಬಯಲಿನಲ್ಲಿಯೂ ಉಷ್ಣ ಮಾರುತ ಸ್ಥಿತಿ ನಿರ್ಮಾಣಗೊಳ್ಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಮುಂದಿನ ಎರಡು ದಿನಗಳಲ್ಲಿ ದಿಲ್ಲಿ,ರಾಜಸ್ಥಾನ,ಪಂಜಾಬ್,ಗುಜರಾತ್,ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಾದ್ಯಂತ ತಾಪಮಾನವು ಒಂದರಿಂದ ಮೂರು ಡಿ.ಸೆ.ವರೆಗೆ ಹೆಚ್ಚುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ಹೇಳಿದೆ.
ಈ ವರ್ಷ ಬರಗಾಲವನ್ನು ಘೋಷಿಸಿರುವ ಮೊದಲ ರಾಜ್ಯವಾಗಿರುವ ಕರ್ನಾಟಕದಲ್ಲಿ ಈಗ ಕನಿಷ್ಠ 500 ಗ್ರಾಮಗಳು ಟ್ಯಾಂಕರ್‌ಗಳ ಮೂಲಕ ಪೂರೈಸಲಾಗುತ್ತಿರುವ ನೀರನ್ನೇ ನಂಬಿಕೊಂಡಿವೆ.
ಮಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ಒಣಗಿ ಹೋಗಿರುವ ಲಾತೂರು ರಾಜ್ಯ ಸರಕಾರವು ವಿಶೇಷ ರೈಲುಗಳ ಮೂಲಕ ತರಿಸುತ್ತಿರುವ ಲಕ್ಷಗಟ್ಟಲೆ ನೀರನ್ನು ಅವಲಂಬಿಸಿದೆ.
ರಾಜ್ಯದಲ್ಲಿ ತೀವ್ರ ನೀರಿನ ಅಭಾವದ ಹಿನ್ನೆಲೆಯಲ್ಲಿ ಐಪಿಎಲ್‌ನ 13 ಪಂದ್ಯಗಳನ್ನು ಮಹಾರಾಷ್ಟ್ರದಿಂದ ಹೊರಗೆ ಸ್ಥಳಾಂತರಿಸುವಂತೆ ಬುಧವಾರ ಬಾಂಬೆ ಉಚ್ಚ ನ್ಯಾಯಾಲಯವು ಆದೇಶಿಸಿದೆ.





