ಮಹಿಳೆಯರು, ಭಿನ್ನಸಾಮರ್ಥ್ಯದವರಿಗೆ ಪಿಎಚ್‌ಡಿ, ಎಂಫಿಲ್ ಅವಧಿ ವಿಸ್ತರಣೆ
ಹೊಸದಿಲ್ಲಿ, ಎ.14: ಮಹಿಳೆಯರು ಹಾಗೂ ಭಿನ್ನಸಾಮರ್ಥ್ಯದ ವ್ಯಕ್ತಿಗಳು ತಮ್ಮ ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಲು ಕಾಲಾವಕಾಶವನ್ನು ಆರು ವರ್ಷಗಳಿಂದ ಎಂಟು ವರ್ಷಗಳಿಗೆ ಹಾಗೂ ಎಂಫಿಲ್ ಪದವಿಯನ್ನು ಪೂರ್ಣಗೊಳಿಸಲು ಇರುವ ಕಾಲಾವಕಾಶವನ್ನು ಎರಡು ವರ್ಷಗಳಿಂದ ಮೂರು ವರ್ಷಗಳಿಗೆ ವಿಸ್ತರಿಸುವ ಉದ್ದೇಶದಿಂದ ಯುಜಿಸಿ ತನ್ನ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಿದೆ.
ಇದರ ಜೊತೆಗೆ ಪಿಎಚ್‌ಡಿ ಹಾಗೂ ಎಂಫಿಲ್‌ಗಳ ಮಹಿಳಾ ಸಂಶೋಧನಾ ಅಭ್ಯರ್ಥಿಗಳಿಗೆ 240 ದಿನಗಳ ಹೆರಿಗೆ ಹಾಗೂ ಶಿಶುಪಾಲನೆ ರಜೆ ಕೂಡಾ ಲಭ್ಯವಾಗಲಿದೆ. ಹೊಸದಿಲ್ಲಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾನವಸಂಪನ್ಮೂಲ ಸಚಿವೆ ಸ್ಮತಿ ಇರಾನಿ ಈ ವಿಷಯವನ್ನು ಪ್ರಕಟಿಸಿದರು. ಸಂಶೋಧನಾ ಕ್ಷೇತ್ರಕ್ಕೆ ಮಹಿಳೆಯರು ಹಾಗೂ ಭಿನ್ನಸಾಮರ್ಥ್ಯದ ವ್ಯಕ್ತಿಗಳ ಪ್ರವೇಶಕ್ಕೆ ಉತ್ತೇಜನ ನೀಡುವ ಉದ್ದೇಶವನ್ನು ಸರಕಾರ ಹೊಂದಿರುವುದಾಗಿ ಅವರು ತಿಳಿಸಿದರು.
ಪಿಎಚ್‌ಡಿ ಹಾಗೂ ಎಂಫಿಲ್ ಸಂಶೋಧನಾ ವಿದ್ಯಾರ್ಥಿನಿಯು ಮದುವೆ ನಿಮಿತ್ತ ಬೇರೆಡೆಗೆ ಸ್ಥಳಾಂತರಗೊಳ್ಳಬೇಕಾದ ಸಂದರ್ಭ ಉದ್ಭವಿಸಿದಲ್ಲಿ, ಆಕೆ ತಾನು ಬಯಸಿದ ವಿವಿಗೆ ವರ್ಗಾವಣೆಗೊಳ್ಳಲು ಅವಕಾಶ ನೀಡಲಾಗುವುದೆಂದು ಇರಾನಿ ತಿಳಿಸಿದ್ದಾರೆ.
ಕಳೆದ ವಾರ ಇರಾನಿ, ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಆಂತರಿಕ ರ್ಯಾಂಕಿಂಗ್‌ಗಳನ್ನು ಪ್ರಕಟಿಸಿದ ಸಂದರ್ಭದಲ್ಲಿ, ಮಹಿಳೆಯರು ಹಾಗೂ ಭಿನ್ನಸಾಮರ್ಥ್ಯದ ವ್ಯಕ್ತಿಗಳಿಗೆ ಯುಜಿಸಿ ನಿಯಮಾವಳಿಗಳನ್ನು ಸಡಿಲುಗೊಳಿಸಬೇಕೆಂದು ಸರಕಾರವು ಕೇಳಿಕೊಂಡಿರುವುದಾಗಿ ಹೇಳಿದ್ದರು.





