2016 ಅಂಬೇಡ್ಕರ್ ವರ್ಷ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೆಟ್ರೋ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರು
ಬೆಂಗಳೂರು, ಎ.14: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಶೋಷಿತ ಸಮುದಾಯದ ನಾಯಕರಲ್ಲ, ಅವರು ಮನುಕುಲದ ನಾಯಕರು. ಹೀಗಾಗಿ ವಿಶ್ವವೇ ಅವರನ್ನು ಸ್ಮರಿಸುತ್ತಿದೆ. ರಾಜ್ಯ ಸರಕಾರವು 2016ನ್ನು ‘ಅಂಬೇಡ್ಕರ್ ವರ್ಷ’ ಎಂದು ಆಚರಿಸಲು ಸಿದ್ಧತೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಕಟಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯೇ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಮಾಡಿರುವುದು 125 ಕೋಟಿ ಭಾರತೀಯರಿಗೆ ಸಂದ ಗೌರವ ಎಂದು ಶ್ಲಾಘಿಸಿದರು.
ಮೆಟ್ರೋ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರು: ವಿಧಾನಸೌಧದ ಮುಂಭಾಗದ ಮೆಟ್ರೋ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಲು ತೀರ್ಮಾನಿಸಲಾಗಿದೆ. ಅಲ್ಲದೆ, ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ‘ಅಂಬೇಡ್ಕರ್ ರೈಲ್ವೆ ನಿಲ್ದಾಣ’ ಎಂದು ಹೆಸರಿಡಲು ಕೇಂದ್ರಕ್ಕೆ ಮನವಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.





