ಮೋದಿಯಿಂದ ದಲಿತರ ಕಣ್ಣೊರೆಸುವ ನಾಟಕ: ಮಾಯಾವತಿ ಟೀಕೆ

ಲಕ್ನೋ,ಎ.14: ಬಿಜೆಪಿಯ ಕುತಂತ್ರಗಳ ವಿರುದ್ಧ ಗುರುವಾರ ದಲಿತರು ಮತ್ತು ಹಿಂದುಳಿದವರಿಗೆ ಎಚ್ಚರಿಕೆಯನ್ನು ನೀಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು, ಅದರ ನಾಯಕರು ಆರೆಸ್ಸೆಸ್‌ನ ಜೀತದಾಳುಗಳಂತೆ ಮಾತ್ರ ಕಾರ್ಯ ನಿರ್ವಹಿಸುತ್ತಾರೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ತಾನು ಒಬಿಸಿ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಳ್ಳುತ್ತಿರುವರಾದರೂ ತನ್ನದೇ ಜನರಿಗೆ ಒಳ್ಳೆಯದನ್ನು ಮಾಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಅವರು ಬೆಟ್ಟು ಮಾಡಿದರು.
ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜಯಂತಿ ಆಚರಣೆ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಥವಾ ಆರೆಸ್ಸೆಸ್ ಯಾವುದೇ ದಲಿತ ಅಥವಾ ಹಿಂದುಳಿದ ವ್ಯಕ್ತಿಯನ್ನು ಪ್ರಧಾನಿ ಅಥವಾ ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬಲ್ಲವು. ಆದರೆ ಆತ ತನ್ನ ಜನರಿಗೇನೂ ಒಳ್ಳೆಯದನ್ನು ಮಾಡುವುದಿಲ್ಲ. ಆತ ಸದಾ ಬಿಜೆಪಿ ಅಥವಾ ಆರೆಸ್ಸೆಸ್‌ನ ಜೀತದಾಳಾಗಿಯೇ ಉಳಿಯುತ್ತಾನೆ ಎಂದರು. ಬಿಜೆಪಿಯು ತನ್ನ ಉತ್ತರ ಪ್ರದೇಶ ಘಟಕದ ಅಧ್ಯಕ್ಷರನ್ನಾಗಿ ಹಿಂದುಳಿದ ಸಮುದಾಯದ ಕೇಶವ ವೌರ್ಯ ಅವರನ್ನು ನೇಮಕಗೊಳಿಸಿರುವ ಹಿನ್ನೆಲೆಯಲ್ಲಿ ಮಾಯಾವತಿಯವರ ಈ ಹೇಳಿಕೆ ಹೊರಬಿದ್ದಿದೆ.





