ಉ.ಕೊರಿಯದ ಮಿಸೈಲ್ ಪರೀಕ್ಷೆ ವಿಫಲ!: ದ.ಕೊರಿಯ, ಅಮೆರಿಕ ಹೇಳಿಕೆ

ನ್ಯೂಯಾರ್ಕ್ ಎಪ್ರಿಲ್15: ಉತ್ತರ ಕೊರಿಯ ಶುಕ್ರವಾರ ಬೆಳಗ್ಗೆ ತನ್ನ ಪೂರ್ವ ತಟದಲ್ಲಿ ಮಿಸೈಲ್ ಪರೀಕ್ಷೆ ನಡೆಸಿದ್ದು. ಅದು ವಿಫಲವಾಗಿದೆ ಎಂದು ದಕ್ಷಿಣ ಕೊರಿಯ ಮತ್ತು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆಂದು ವರದಿಯಾಗಿದೆ. ಕ್ಷಿಪಣಿಯನ್ನು ಉತ್ತರ ಕೊರಿಯದ ಈಗಿನ ಅಧ್ಯಕ್ಷ ಕಿಮ್ ಜಂಗ್ ಉನ್‌ರ ಅಜ್ಜ ಮತ್ತು ಉತ್ತರ ಕೊರಿಯದ ಸಂಸ್ಥಾಪಕ ನಾಯಕರಾಗಿದ್ದ ಕಿಮ್ ಇಲ್ ಸಂಗ್‌ರ ಜನ್ಮದಿನದ ಪ್ರಯುಕ್ತ ಪರೀಕ್ಷಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಉತ್ತರ ಕೊರಿಯ ಯಾವ ಕ್ಷಿಪಣಿಯನ್ನು ಲಾಂಚ್ ಮಾಡಿದೆ ಮತ್ತು ಅದು ಎಷ್ಟು ದೂರ ಹಾರುವ ಸಾಮರ್ಥ್ಯ ಹೊಂದಿತ್ತು ಎಂದು ಸದ್ಯ ತಿಳಿದು ಬಂದಿಲ್ಲ ಎಂದು ದಕ್ಷಿಣ ಕೊರಿಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಪರೀಕ್ಷೆಯನ್ನು ವಿಶೇಷವಾಗಿ ಕೊರಿಯನ್ ದ್ವೀಪಕಲ್ಪದಲ್ಲಿ ಅತ್ಯಧಿಕ ಒತ್ತಡವಿದ್ದರೂ ಪರೀಕ್ಷಿಸಲಾಗಿದೆ. ವಿಶ್ವಸಂಸ್ಥೆ ಕ್ಷಿಪಣಿ ಪರೀಕ್ಷಿಸದಂತೆ ತೀವ್ರ ಒತ್ತಡ ಹೇರಿದ್ದರೂ ಉತ್ತರ ಕೊರಿಯ ನಿರಂತರ ಕ್ಷಿಪಣೆ ಪರೀಕ್ಷೆ ನಡೆಸುತ್ತಿದೆ. ಉತ್ತರ ಕೊರಿಯ ಜನವರಿಯಲ್ಲಿ ಪರಮಾಣು ಪರೀಕ್ಷೆ ಮತ್ತು ಫೆಬ್ರವರಿಯಲ್ಲಿ ಸೆಟ್‌ಲೈಟ್ ಪರೀಕ್ಷೆ ನಡೆಸಿದ ನಂತರ ಉತ್ತರ ಕೊರಿಯದ ವಿರುದ್ಧ ದಿಗ್ಬಂಧನ ಹೇರಲು ನಿರ್ಧರಿಸಲಾಗಿತ್ತು.
ಕಳೆದ ಮಾರ್ಚ್‌ನಲ್ಲಿ ಉತ್ತರ ಕೊರಿಯ ಬ್ಯಾಲೆಸ್ಟಿಕ್ ಮಿಸೈಲ್‌ನಲ್ಲಿ ಇರಿಸಬಹುದಾದ ಸಣ್ಣ ಪರಮಾಣು ಉಪಕರಣವನ್ನು ವಿಕಸಿತಗೊಳಿಸಲಾಗಿದೆ ಎಂದು ಹೇಳಿತ್ತು. ಆದರೆ ವಿಜ್ಞಾನಿಗಳು ಅದರ ವಾದದ ಕುರಿತು ಸಂದೇಹ ಪ್ರಕಟಿಸಿದ್ದರು. ಅಮೆರಿಕ ಹೇಳಿರುವ ಪ್ರಕಾರ ಉತ್ತರಕೊರಿಯ ಮಿಸೈಲ್ ಪರೀಕ್ಷೆ ನಡೆಸಿರುವುದನ್ನು ಅದು ಗುರುತಿಸಿದೆ. ಆದರೆ ಯಾವ ರೀತಿಯ ಮಿಸೈಲನ್ನು ಪರೀಕ್ಷಿಸಲಾಗಿದೆ ಎಂದು ಸಂಪೂರ್ಣ ತನಗೆ ತಿಳಿದು ಬಂದಿಲ್ಲವೆಂದು ಅಮೆರಿಕ ಹೇಳಿಕೊಂಡಿದೆ. "ನಾವು ಮತ್ತೆ ಉತ್ತರ ಕೊರಿಯದ ಕೆಲಸ ಮತ್ತು ಮಾತನ್ನು ತಡೆಯಬೇಕೆಂದು ಹೇಳಬಯಸುತ್ತೇವೆ. ಅದರಿಂದಾಗಿ ಆ ವಲಯದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿದೆ" ಎಂದು ಅಮೆರಿಕದ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.







