ಗಳಿಸಿದ ಸಂಪತ್ತಿನ ಒಂದಂಶವನ್ನು ಸಮಾಜಕ್ಕೆ ದಾನ ಮಾಡಿ : ಸಾದ್ವಿ

ಸುಳ್ಯ : ಗಳಿಸಿದ ಸಂಪತ್ತಿನ ಒಂದಂಶವನ್ನಾದರೂ, ಸಮಾಜಕ್ಕೆ ಸದ್ವಿನಿಯೋಗ ಮಾಡಬೇಕು. ಅ ಮೂಲಕ ಧರ್ಮ ಮಾರ್ಗದಲ್ಲಿ ಅಡಿಯಿಡಬೇಕು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಸಾದ್ವಿ ಮಾತಾನಂದಮಯಿ ಹೇಳಿದರು.
ಅವರು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಳದ ಬ್ರಹ್ಮಕಲಶ, ನೂತನ ಧ್ವಜ ಪ್ರತಿಷ್ಠೆ ಹಾಗೂ ಜಾತ್ರೆಯ ಪ್ರಯುಕ್ತ ನಡೆದ ಕೊನೆಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಅಂತರಂಗ ಶುದ್ಧಿಯುರಿಸಿ, ಸಕರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ಸ್ವಾರ್ಥ ಮನೋಭಾವನೆ ಬಿಟ್ಟು, ಸಂಕಲ್ಪ ಶಕ್ತಿ ತೊಟ್ಟರೆ ಪುಣ್ಯ ಕಾರ್ಯ ಸಾಧ್ಯ ಎಂದ ಅವರು, ನಮ್ಮೊಳಗಿನ ದುಷ್ಟ ಶಕ್ತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಕಾರಣವಾಗಬೇಕು ಎಂದರು.
ಮುಖ್ಯ ಅತಿಥಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಸರ್ವೇಜನ ಸುಖಿನೋಭವಂತೋ ಎಂದು ಜಗತ್ತಿನ ಸುಖ ಬಯಸುವ ಶ್ರೇಷ್ಟ ಧರ್ಮ ಹಿಂದೂ ಧರ್ಮ. ಅಂತಹ ಧರ್ಮ ಎಂದಿಗೂ ಕೋಮುವಾದಿ ಆಗಲು ಸಾಧ್ಯವಿಲ್ಲ. ಹಾಗಾಗಿ ಹಿಂದೂ ಧರ್ಮ ಉಳಿದರೆ ಮಾತ್ರ ಭಾರತ ಉಳಿಯಲು ಸಾಧ್ಯ ಎಂದರು.
ಧರ್ಮದ ಉಳಿವಿನಲ್ಲಿ ತಾಯಂದಿರ ಪಾತ್ರ ಮುಖ್ಯವಾದದು. ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿದರೆ, ಧರ್ಮದ ಅಡಿಪಾಯ ಉಳಿಯಬಹುದು ಎಂದರು.
ಈ ಸಂದರ್ಭದಲ್ಲಿ ಸಾದ್ವಿ ಮಾತಾನಂದಮಯಿ ಅವರು ಜಲದಾರೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಕೆಮ್ಮಿಂಜೆ ಕಾರ್ತಿಕ್ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಡ್ಡೋಡಿ ಜ್ಞಾನರತ್ನ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ಗೌಡ ದೇವಸ್ಯ, ಉದ್ಯಮಿ ವಸಂತ ಪೈ ಬದಿಯಡ್ಕ, ಪುತ್ತೂರು ಉಪವಿಭಾಗ ವಲಯ ಅರಣ್ಯಾಧಿಕಾರಿ ವಿ.ವಿ ಕಾರ್ಯಪ್ಪ, ತಾ.ಪಂ ಮಾಜಿ ಉಪಾಧ್ಯಕ್ಷ ದಿನೇಶ್ ಮೆದು, ಎಪಿಎಂಸಿ ಸದಸ್ಯ ಶ್ರೀರಾಮ ಪಾಟಾಜೆ, ಶ್ರೀ ಕ್ಷೇತ್ರದ ಮಾಜಿ ಮೊಕ್ತೇಸರ ಗುರುವ, ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸತ್ಯನಾರಾಯಣ ಕೋಡಿಬೈಲು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪಿ. ಮಂಜಪ್ಪ ರೈ, ಎನ್ ಕುಶಾಲಪ್ಪ ಗೌಡ, ಪಿ.ವೆಂಕಟಕೃಷ್ಣ ರಾವ್, ರಾಮಣ್ಣ ರೈ ವೈಪಾಲ, ದಾಮೋದರ ನಾಯ್ಕ, ಸುಜಾತ ಪದ್ಮನಾಭ ಶೆಟ್ಟಿ, ಭಾಮಿನಿ ಜತ್ತಪ್ಪ ಗೌಡ, ಸ್ಮರಣ ಸಂಚಿಕೆ ಸಂಪಾದಕ ರಾಮಕೃಷ್ಣ ಭಟ್ ಚೂಂತಾರು ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ಎನ್ ಮನ್ಮಥ ಸ್ವಾಗತಿಸಿ, ಸ್ಮರಣ ಸಂಚಿಕೆ ಸಮಿತಿ ಸಂಚಾಲಕ ಪ್ರದೀಪ್ ಕುಮಾರ್ ರೈ ಪನ್ನೆ ವಂದಿಸಿದರು. ಸಭಾ ನಿರ್ವಹಣಾ ಸಮಿತಿ ಸಂಚಾಲಕ ವಾಸುದೇವ ಪೆರುವಾಜೆ ವಂದಿಸಿದರು.







