ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಸಾಮೂಹಿಕ ಧರಣಿ

ಮಂಗಳೂರು, ಎ.15: ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಲು ಉನ್ನತ ಮಟ್ಟದ ತನಿಖೆಗಾಗಿ ಆಗ್ರಹಿಸಿ ಮತ್ತು ಬಾಳಿಗ ಕುಟುಂಬಕ್ಕೆ ಆರ್ಥಿಕ ಪರಿಹಾರ ನೀಡಲು ಒತ್ತಾಯಿಸಿ ಇಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದ.ಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸಾಮೂಹಿಕ ಧರಣಿ ನಡೆಯಿತು.
ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವಿಚಾರವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರು ವಿನಾಯಕ ಬಾಳಿಗ ಹತ್ಯೆಯ ವಿರುದ್ಧ ಸಚಿವ ಯು.ಟಿ.ಖಾದರ್ ಹೊರತುಪಡಿಸಿದರೆ ಕಾಂಗ್ರೆಸ್ ನಾಯಕರುಗಳು, ಸಚಿವರುಗಳು ಮೌನವಾಗಿದ್ದಾರೆ. ವಿನಾಯಕ್ ಬಾಳಿಗ ಬಿಜೆಪಿ ಕಾರ್ಯಕರ್ತನಾಗಿದ್ದರೂ ಬಿಜೆಪಿ ಮುಖಂಡರುಗಳು, ಸಂಸದ ನಳಿನ್ ಕುಮಾರ್ ಕಟೀಲ್ ಮೌನವಾಗಿದ್ದಾರೆ. ಬಡವರ ಬಂಧು ಎಂದೆ ಕರೆಸಿಕೊಳ್ಳುವ ಬಿ.ಜನಾರ್ದನ ಪೂಜಾರಿಯೂ ಒಮ್ಮೆಯೂ ಧ್ವನಿಯೆತ್ತಿಲ್ಲ.ಅನ್ಯಾಯ ಕಂಡೂ ಕೂಡ ಕೆಲವೇ ಜನ ಹೊರತುಪಡಿಸಿ ಮಂಗಳೂರಿನ ಜನ ಮೌನವಾಗಿದ್ದಾರೆ. ಇದರ ಹಿಂದೆ ದೊಡ್ಡ ಮಾಫಿಯವಿದೆ ಎಂದು ಹೇಳಿದರು.
ಈ ಪ್ರಕರಣದ ನಂತರ ನಾಪತ್ತೆಯಾಗಿರುವ ನರೇಶ್ ಶೆಣೈ ಗೆ ಜಾಮೀನು ಅರ್ಜಿಯನ್ನು ಅವರ ವಕೀಲರು ಹಾಕಿದ್ದಾರೆ. ಆದರೆ ವಕೀಲರಿಗೆ ಸಿಗುವ ನರೇಶ್ ಶೆಣೈ ಪೊಲೀಸರಿಗೆ ಸಿಗುತ್ತಿಲ್ಲ. ಇದು ದೊಡ್ಡ ಪವಾಡದ ರೀತಿಯಲ್ಲಿ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.
ಮಂಗಳೂರು ಜನರು ನರಸತ್ತ ರೀತಿಯಲ್ಲಿ ವೌನವಾಗಿರುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ಬಾಳಿಗ ಹತ್ಯೆ ಮಾಡಿದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಬೇಕು ಎಂದು ಹೇಳಿದರು. ವಿನಾಯಕ ಬಾಳಿಗ ಅವರಲ್ಲಿ ಸಮಾಜವನ್ನು ಸುಧಾರಿಸುವ ಛಲವಿತ್ತು. ಬಾಳಿಗ ಅವರನ್ನು ಕೊಲ್ಲುವ ಮೂಲಕ ಸಮಾಜಘಾತುಕರು ಪ್ರಕರಣಗಳು ಮುಚ್ಚಲು ಪ್ರಯತ್ನ ಮಾಡಿದ್ದಾರೆ. ಆದರೆ ಈ ಪ್ರಕರಣಗಳನ್ನು ಮುಚ್ಚಲು ಬಿಡುವುದಿಲ್ಲ. ಬಾಳಿಗರು ಆರ್‌ಟಿಐ ಮೂಲಕ ಮಾಡಿದ ಎಲ್ಲಾ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರುಗಳಾದ ದಯಾನಂದ ಶೆಟ್ಟಿ, ವಿ.ಸೀತಾರಾಮ್ ಬೇರಿಂಜ, ಎಂ ಕರುಣಾಕರ್ ಕುಲಾಲ್, ಸಂತೋಷ್ ಬಜಾಲ್, ರೆನ್ನಿ ಡಿಸೋಜ, ಇಮ್ತಿಯಾಝ್ ಬಿ.ಕೆ, ನಿತೀನ್ ಕುತ್ತಾರ್, ಚರಣ್ , ದಿನೇಶ್ ಹೆಗ್ಡೆ ಉಳಿಪಾಡಿ , ವಿನಾಯಕ್ ಬಾಳಿಗ ಅವರ ಆಪ್ತ ಗಣೇಶ್ ಬಾಳಿಗ, ವಿನಾಯಕ್ ಬಾಳಿಗ ಅವರ ತಂದೆ, ತಾಯಿ ಉಪಸ್ಥಿತರಿದ್ದರು.







