ಬರಪೀಡಿತ ಲಾತೂರ್‌ಗೆ ಮಹಾರಾಷ್ಟ್ರ ಸಚಿವರ ಭೇಟಿ
ಹೆಲಿಪ್ಯಾಡ್ ತೊಳೆಯಲು 10 ಸಾವಿರ ಲೀ. ನೀರು ವ್ಯರ್ಥ

ಹೊಸದಿಲ್ಲಿ,ಎ.15: ತೀವ್ರ ಬರದಿಂದ ತತ್ತರಿಸಿರುವ ಮಹಾರಾಷ್ಟ್ರದ ಲಾತೂರ್ ಜಿಲ್ಲೆಗೆ, ರಾಜ್ಯದ ಕೃಷಿ ಸಚಿವರ ಆಗಮನದ ಸಂದರ್ಭದಲ್ಲಿ ಹೆಲಿಪ್ಯಾಡ್ ಸ್ವಚ್ಛಗೊಳಿಸಲು ಸುಮಾರು 10 ಸಾವಿರ ಲೀಟರ್‌ಗಳನ್ನು ಚೆಲ್ಲಲಾಗಿದೆಯೆಂದು ಇಂಗ್ಲಿಷ್ ಟಿವಿ ವಾಹಿನಿಯೊಂದು ವರದಿ ಮಾಡಿದೆ.
ಮಹಾರಾಷ್ಟ್ರದ ಕೃಷಿ ಸಚಿವ ಏಕನಾಥ್ ಖಾಡ್ಸೆ ಅವರು ಲಾತೂರ್ ನಗರದಿಂದ ಕೇವಲ 40 ನಿಮಿಷಗಳ ಪ್ರಯಾಣವಿರುವ ಬೇಲ್‌ಕುಂಡ್ ಗ್ರಾಮಕ್ಕೆ ಕಾರಿನಲ್ಲಿ ತೆರಳಬಹುದಿತ್ತು. ಆದರೆ ಅವರು ಹೆಲಿಕಾಪ್ಟರ್‌ನಲ್ಲೇ ಪ್ರಯಾಣಿಸಲು ನಿರ್ಧರಿಸಿದರೆಂದು ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೆಲಿಪ್ಯಾಡನ್ನು ಸ್ವಚ್ಛಗೊಳಿಸಲು ಸುಮಾರು 10 ಸಾವಿರ ಲೀಟರ್ ನೀರನ್ನ್ನು ಬಳಸಲಾಯಿತು. ಇದು ಲಾತೂರ್ ಜಿಲ್ಲೆಯ ಒಂದು ಕುಟುಂಬಕ್ಕೆ ಪ್ರತಿವಾರ ನೀಡಲಾಗುವ ನೀರಿನ ಪ್ರಮಾಣದಷ್ಟಿದೆಯೆಂದು ಅವರು ತಿಳಿಸಿದ್ದಾರೆ. ತನ್ನ ಭೇಟಿಯ ವೇಳೆ ಅಪಾರ ಪ್ರಮಾಣದ ನೀರನ್ನು ವ್ಯರ್ಥಮಾಡಲಾಗಿದೆಯೆಂಬ ಆರೋಪಗಳನ್ನು ಖಾಡ್ಸೆ ನಿರಾಕರಿಸಿದ್ದಾರೆ. ಈ ವಿಷಯವನ್ನು ವಿನಾ ಕಾರಣ ದೊಡ್ಡದು ಮಾಡಲಾಗಿದೆಯೆಂದು ಅವರು ದೂರಿದ್ದಾರೆ.
ಮರಾಠಾವಾಡ ಪ್ರಾಂತ್ಯದಲ್ಲಿರುವ ಲಾತೂರ್ ಜಿಲ್ಲೆಗೆ ಎಪ್ರಿಲ್ 11ರಿಂದೀಚೆಗೆ ರೈಲಿನ ಮೂಲಕ ಕೃಷ್ಣಾ ನದಿಯಿಂದ ಒಟ್ಟು 15 ಲಕ್ಷ ಲೀಟರ್ ನೀರನ್ನು ಪೂರೈಕೆ ಮಾಡಲಾಗಿದೆ.





