ಗ್ರಾಹಕರ ಆಗ್ರಹಕ್ಕೆ ಮಣಿದ ಧೋನಿ, ಬ್ರ್ಯಾಂಡ್ ರಾಯಭಾರಿ ಹುದ್ದೆಗೆ ಬೈ ಬೈ

ಹೊಸದಿಲ್ಲಿ , ಎ. 15: ರಿಯಲ್ ಎಸ್ಟೇಟ್ ಕಂಪೆನಿ ಅಮ್ರಪಾಲಿಯಿಂದ ಸಂಬಂಧ ಕಡಿದುಕೊಳ್ಳಬೇಕು ಎಂದು ಆಗ್ರಹಿಸಿ ಅಸಂತೃಪ್ತ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದ ಹಲವು ದಿನಗಳ ಬಳಿಕ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕಂಪೆನಿಯ ಬ್ರ್ಯಾಂಡ್ ರಾಯಭಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
"ಧೋನಿ ಇನ್ನು ನಮ್ಮ ಬ್ರ್ಯಾಂಡ್ ಅಂಬಾಸಡರ್ ಅಲ್ಲ ...ಅಮ್ರಪಾಲಿಯೊಂದಿಗಿನ ಸಂಬಂಧದಿಂದ ಅವರ ವರ್ಚಸ್ಸಿಗೆ ಧಕ್ಕೆಯಾಗುವುದು ಬೇಡ. ಧೋನಿ ಹಾಗು ನಾವು ಒಟ್ಟಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ " ಎಂದು ಕಂಪೆನಿಯ ಅಧ್ಯಕ್ಷ ಹಾಗು ಆಡಳಿತ ನಿರ್ದೇಶಕ ಅನಿಲ್ ಶರ್ಮ ಹೇಳಿದ್ದಾರೆ. ಧೋನಿ ಕಳೆದ 6-7 ವರ್ಷಗಳಿಂದ ಅಮ್ರಪಾಲಿಯ ರಾಯಭಾರಿಯಾಗಿದ್ದರು.
ಅಮ್ರಪಾಲಿಯ ನೋಯ್ಡ ವಸತಿ ಯೋಜನೆಯ ವಿರುದ್ಧ ವ್ಯಾಪಕ ದೂರುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಗ್ರಾಹಕರು ಈ ದೂರುಗಳನ್ನು ಧೋನಿಗೂ ಟ್ಯಾಗ್ ಮಾಡಿ ಕಂಪೆನಿಯಿಂದ ದೂರ ಆಗುವಂತೆ ಅಥವಾ ಗ್ರಾಹಕರಿಗೆ ಸಮಯದಲ್ಲಿ ಯೋಜನೆ ಪೂರ್ಣಗೊಳಿಸಿ ಕೊಡಲು ಕಂಪೆನಿಗೆ ಹೇಳುವಂತೆ ಆಗ್ರಹಿಸಿದ್ದರು.





