ಮೇ 29ರಂದು ಬೆಂಗಳೂರಿನಲ್ಲಿ ಐಪಿಎಲ್ ಫೈನಲ್

ಬೆಂಗಳೂರು, ಎ.15: ಬರಪೀಡಿತ ಮಹಾರಾಷ್ಟ್ರದಲ್ಲಿ ಮೇ ತಿಂಗಳಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸದಂತೆ ಬಾಂಬೆ ಹೈಕೋರ್ಟ್ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಮೇ 29ರಂದು ಮುಂಬೈನಲ್ಲಿ ನಿಗದಿಯಾಗಿರುವ ಫೈನಲ್ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಂಡಿದೆ.
ಮಾಹಾರಾಷ್ಟ್ರದ ಮುಂಬೈ, ಪುಣೆ ಮತ್ತು ನಾಗ್ಪುರದಲ್ಲಿ ನಡೆಯಬೇಕಿದ್ದ 13 ಪಂದ್ಯಗಳನ್ನು ಬೇರೆ ರಾಜ್ಯಗಳ ಕ್ರೀಡಾಂಗಣಗಳಿಗೆ ಸ್ಥಳಾಂತರಿಸಬೇಕಾಗಿರುವುದು ಅನಿವಾರ್ಯವಾಗಿದೆ.
ಮೇ 24ರಂದು ಮೊದಲ ಕ್ವಾಲಿಫೈಯರ್ ಪಂದ್ಯ ಬೆಂಗಳೂರಿನಲ್ಲಿ ನಿಗದಿಯಾಗಿತ್ತು. ಇದೀಗ ಮೇ 29ರಂದು ಫೈನಲ್ ಪಂದ್ಯವನ್ನು ಆಯೋಜಿಸುವ ಅವಕಾಶ ಬೆಂಗಳೂರಿಗೆ ದೊರಕಿದೆ.
ಪುಣೆಯಲ್ಲಿ ಮೇ 25ರಂದು ನಡೆಯಬೇಕಿದ್ದ ಎರಡನೆ ಕ್ವಾಲಿಫೈಯರ್ ಮತ್ತು ಮೇ 27ರಂದು ನಡೆಯಲಿದ್ದ ಎಲಿಮಿನೆಟರ್ ಪಂದ್ಯ ಕೋಲ್ಕತಾದ ಈಡನ್ ಗಾರ್ಡರ್ನ್ಸ್‌ಗೆ ಸ್ಥಳಾಂತರಗೊಳ್ಳಲಿದೆ. ಉಳಿದ ಪಂದ್ಯಗಳು ರಾಯ್‌ಪುರ, ಜೈಪುರ, ವಿಶಾಖಪಟ್ಟಣ ಮತ್ತು ಕಾನ್ಪುರಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ.
Next Story





