ರೈತರಿಂದ ಬಲವಂತ ಸಾಲ ವಸೂಲಿ ಬೇಡ: ಜಿ.ಪರಮೇಶ್ವರ್
ಚಿಕ್ಕಮಗಳೂರು, ಎ.15: ರಾಜ್ಯದಲ್ಲಿ ಕಳೆದ 48 ವರ್ಷಗಳ ನಂತರ ಭೀಕರ ಬರಗಾಲ ಪರಿಸ್ಥಿತಿ ಇದ್ದು, ಸುಸ್ತಿದಾರ ರೈತರಿಂದ ಬಲವಂತ ಸಾಲ ವಸೂಲಿ ಮಾಡದಂತೆ ರಾಜ್ಯದ ಬ್ಯಾಂಕ್‌ಗಳಿಗೆ ರಾಜ್ಯ ಸರಕಾರ ಸೂಚಿಸಿದೆ ಎಂದು ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆದ ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಗತ್ಯವಿರುವ ಕಡೆ ಕುಡಿಯುವ ನೀರನ್ನು ಒದಗಿಸಬೇಕು. ಉದ್ಯೋಗವಿಲ್ಲದೇ ಗುಳೆ ಹೋಗುವುದನ್ನು ತಪ್ಪಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ಬರ ನಿರ್ವಹಣೆಗೆ ಅಗತ್ಯವಿರುವ ಹಣವು ಸಹ ಜಿಲ್ಲಾಧಿಕಾರಿಗಳಲ್ಲಿದೆ. ರಾಜ್ಯದಲ್ಲಿ ಬಂದಿರುವ ಬರಗಾಲ ಯಾರೂ ತಂದುಕೊಂಡಿರುವುದಲ್ಲ. ಇದು ಪ್ರಕೃತಿಯ ವಿಕೋಪ. ಇಂತಹ ಕಠಿಣ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸಲು ರಾಜ್ಯಸರಕಾರ ಸಿದ್ಧವಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಧಾನಿ ಬಳಿಗೆ ಹೋಗಿದ್ದ ನಿಯೋಗ ಬರಗಾಲ ನಿರ್ವ ಹಣೆಗೆ 3,800 ಕೋಟಿ ರೂ. ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಿತ್ತು. ಕೇಂದ್ರ ಸರಕಾರ 1,500 ಕೋಟಿ ರೂ. ಬಹು ವಿಳಂಬವಾಗಿ ನೀಡಿದೆ. ಸರಕಾರ ಈಗಾಗಲೇ ಅಗತ್ಯವಿರುವ ಪ್ರದೇಶಗಳಿಗೆ ಹಣ ಹಂಚಿಕೆ ಮಾಡಿದೆ. ರಾಜ್ಯ ಸರಕಾರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು 500 ಕೋಟಿ ರೂ. ಮಂಜೂರು ಮಾಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಲಕ್ಷ ರೂ. ಬಿಡುಗಡೆ ಮೂಲಕ ಬರಪರಿಸ್ಥಿತಿ ಎದುರಿಸಲು ಸಿದ್ದತೆ ನಡೆಸಿದೆ ಎಂದರು.
ಶೀಘ್ರದಲ್ಲಿಯೇ ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸುವುದಾಗಿ ಹೇಳಿದ ಅವರು, ಕೇಂದ್ರ ಸರಕಾರಕ್ಕೆ ಬರ ನಿರ್ವಹಣೆಗೆ ಹೆಚ್ಚುವರಿ ಹಣದ ಬೇಡಿಕೆ ಸಲ್ಲಿಸಲಾಗಿದೆ. ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದ ಅವರು, ಲೋಕಾಯುಕ್ತರ ಅಧಿಕಾರದ ವ್ಯಾಪ್ತಿ ಮತ್ತು ಲೋಕಾಯುಕ್ತ ಪೊಲೀಸರ ಅಧಿಕಾರ ವ್ಯಾಪ್ತಿಯ ನಡುವಿನ ಗೊಂದಲ ನಿವಾರಿಸಲು ರಾಜ್ಯ ಸರ್ಕಾರ ಎಸಿಬಿ ಜಾರಿಗೆ ತರುವ ತೀರ್ಮಾನ ಕೈಗೊಂಡಿದೆ. ದೇಶದಲ್ಲಿ ಸುಮಾರು 18 ರಾಜ್ಯಗಳಲ್ಲಿ ಎಸಿಬಿ ಕಾರ್ಯನಿರ್ವಹಿಸುತ್ತಿದೆ.
ರಾಜ್ಯ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ಯ ಬಗ್ಗೆ ಹಲವು ತಪ್ಪು ಅಭಿಪ್ರಾಯಗಳನ್ನು ಪಸರಿಸಲಾಗುತ್ತಿದೆ. ಆದರೆ ಲೋಕಾಯುಕ್ತ ಪೊಲೀಸರಿಗೆ ಆಡಳಿತಾತ್ಮಕ ನಿರ್ವಹಣೆಯ ಜವಾಬ್ದಾರಿಯನ್ನಷ್ಟೆ ಕಾನೂನಿನಲ್ಲಿ ನೀಡಲಾಗಿದೆ. ಅವರಿಗೆ ಆರೋಪಿಗಳನ್ನು ಬಂಧಿಸುವ, ದಾಳಿ ನಡೆಸುವ ಅಧಿಕಾರವನ್ನು ನೀಡದಿದ್ದರೂ ಕೆಲವು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವುದು, ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರೂ ಅದನ್ನು ತಪ್ಪಿಸಲು ಎಸಿಬಿ ಜಾರಿಗೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಷಡಕ್ಷರಿಸ್ವಾಮಿ, ಎಸ್ಪಿ ಕೆ.ಸಂತೋಷ್‌ಬಾಬು, ಮಾಜಿ ಎಂಲ್‌ಸಿ ಗಾಯತ್ರಿಶಾಂತೇಗೌಡ, ತೆಂಗುನಾರು ನಿಗಮ ಮಂಡಳಿಯ ಕಡೂರು ನಂಜಪ್ಪ, ಕಾಂಗ್ರೆಸ್‌ನ ಉಪಾಧ್ಯಕ್ಷ ಶಾಂತೇಗೌಡ, ಎ.ಎನ್.ಮಹೇಶ್ ಉಪಸ್ಥಿತರಿದ್ದರು.







