ಸೊರಬ ತಾಲೂಕಿನಲ್ಲಿ ಮತ್ತೆ 12 ಜನರಿಗೆ ಜ್ವರ ಬಾಧೆ
ಶಿವಮೊಗ್ಗ, ಎ. 15: ಇತ್ತೀಚೆಗೆ ಇಬ್ಬರಲ್ಲಿ ಡೆಂಗ್ ಕಾಣಿಸಿಕೊಂಡಿದ್ದ ಜಿಲ್ಲೆಯ ಸೊರಬ ತಾಲೂಕಿನ ಉದ್ರಿ-ವಡ್ಡಿಗೆರೆ ಗ್ರಾಮದಲ್ಲಿ ಮತ್ತೆ ಹೊಸದಾಗಿ 12 ಜನರು ಜ್ವರ ಬಾಧೆಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯು ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆದಿದೆ. ಜ್ವರ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದೆ. ಗ್ರಾಮದಾದ್ಯಂತ ವ್ಯಾಪಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಮೊದಲು ಉದ್ರಿ-ವಡ್ಡಿಗೇರೆ ಗ್ರಾಮದಲ್ಲಿ ಸುಮಾರು ನಾಲ್ವರು ವ್ಯಕ್ತಿಗಳಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಇವರ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಇಬ್ಬರು ಡೆಂಗ್ ಜ್ವರದಿಂದ ಬಳಲುತ್ತಿದ್ದುದು ಪತ್ತೆಯಾಗಿತ್ತು. ಇವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಸ್ತುತ ಚೇತರಿಸಿಕೊಂಡಿದ್ದಾರೆ. ಇದೀಗ ಇದೇ ಗ್ರಾಮದಲ್ಲಿ ಮತ್ತೆ 12 ಜನರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಪೀಡಿತರ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಪರೀಕ್ಷಾ ವರದಿಯ ನಂತರವಷ್ಟೆ ಡೆಂಗ್ ಜ್ವರದ ಬಗ್ಗೆ ಖಚಿತವಾಗಬೇಕಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿ.ಎಚ್.ಒ.) ಡಾ. ರಾಜೇಶ್ ಸುರಗೀಹಳ್ಳಿಯವರು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ಶಾಲೆಯೊಂದರ ಕೊಠಡಿಯಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ. ನುರಿತ ವೈದ್ಯರು, ಶುಶ್ರೂಷಕರ ತಂಡ ಗ್ರಾಮದಲ್ಲಿಯೇ ಬೀಡು ಬಿಟ್ಟಿದೆ. ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸುತ್ತಿದೆ. ತುರ್ತು ಚಿಕಿತ್ಸೆ ಅಗತ್ಯವಿರುವವರನ್ನು ಆಸ್ಪತ್ರೆಗೆ ಕರೆತರುವ ಉದ್ದೇಶದಿಂದಲೇ ವಾಹನವೊಂದನ್ನು ಕೂಡ ಗ್ರಾಮದಲ್ಲಿಯೇ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ವ್ಯಾಪಕ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಮನೆ ಮನೆಗೆ ಭೇಟಿಯಿತ್ತು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಔಷಧೋಪಚಾರ ಮಾಡಲಾಗುತ್ತಿದೆ. ತಾವು ಕೂಡ ಗ್ರಾಮಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದೇನೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ. ಮಂಗನ ಕಾಯಿಲೆ 12 ಪ್ರಕರಣ ಪತ್ತೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣದಲ್ಲಿದೆ. ಕಳೆದ ವರ್ಷ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನಲ್ಲಿ 40 ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಪ್ರಸ್ತುತ ವರ್ಷ ಕೇವಲ 12 ಪ್ರಕರಣಗಳು ಮಾತ್ರ ವರದಿಯಾಗಿವೆ. ಇತ್ತೀಚೆಗೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಭಾಗದಲ್ಲಿ ಒಂದಿಬ್ಬರಲ್ಲಿ ರೋಗ ಲಕ್ಷಣಗಳು ಪತ್ತೆಯಾಗಿದ್ದವು. ಉಳಿದಂತೆ ಯಾವುದೇ ಹೊಸ ಪ್ರಕರಣಗಳು ಬೆಳಕಿಗೆ ಬಂದಿಲ್ಲ.
ಡಾ. ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ





