ಉಪನ್ಯಾಸಕರ ಸಂಘದ ಅಧ್ಯಕ್ಷರ ಪ್ರತಿಕೃತಿ ದಹಿಸಿ ಪ್ರತಿಭಟನೆ
ದ್ವಿತೀಯ ಪಿಯು ವೌಲ್ಯಮಾಪನ ಬಹಿಷ್ಕಾರಕ್ಕೆ ಆಕ್ರೋಶ

ಶಿವಮೊಗ್ಗ, ಎ. 15: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ವೌಲ್ಯಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರ ಧೋರಣೆ ವಿರೋಧಿಸಿ ಶುಕ್ರವಾರ ನಗರದ ಗೋಪಿ ವೃತ್ತದಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಕಾರ್ಯಕರ್ತರು, ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆಯವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಉಪನ್ಯಾಸಕರು ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ. ರಾಜ್ಯದ 6.40 ಲಕ್ಷ ಪಿಯು ವಿದ್ಯಾರ್ಥಿಗಳ ಭವಿ ಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲವಾಗಿದೆ. ತಮ್ಮ ಮೇಲಿರುವ ಜವಾಬ್ದಾರಿ ಅರಿತು ಉಪನ್ಯಾಸಕರು ಪ್ರತಿಭಟನೆ ಕೈಬಿಟ್ಟು, ತಕ್ಷಣದಿಂದಲೇ ವೌಲ್ಯಮಾಪನ ಕಾರ್ಯಕ್ಕೆ ಹಾಜರಾಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ. ಸರಿಯಲ್ಲ:
ರಾಜ್ಯದಲ್ಲಿ 14,600 ಅತಿಥಿ ಉಪನ್ಯಾಸಕರು 10-15 ವರ್ಷಗಳಿಂದ ತಮ್ಮ ವಿದ್ಯಾರ್ಹತೆಗೆ ತಕ್ಕ ವೇತನ ಮತ್ತು ಸೌಲಭ್ಯ ಪಡೆಯದೆ ಗಾಣದ ಎತ್ತುಗಳಂತೆ ದುಡಿಯುತ್ತಿದ್ದಾರೆ. ಅದೇ ರೀತಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಮಾಹೆಯಾನ ಕೇವಲ 10 ರಿಂದ 12 ಸಾವಿರ ರೂ. ಸಂಬಳಕ್ಕೆ ಸಾವಿರಾರು ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನು ಪ್ರತಿಭಟನನಿರತ ಉಪನ್ಯಾಸಕರು ಅರಿತುಕೊಳ್ಳಬೇಕಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ. ಅತಿಥಿ ಉಪನ್ಯಾಸಕರು, ಶಿಕ್ಷಕರು, ರಾಜ್ಯದ ಎಲ್ಲ ಇಲಾಖೆಗಳ ನೌಕರರಿಗೆ ವಿದ್ಯೆ-ಹುದ್ದೆಗೆ ತಕ್ಕಂತ ಸಂಬಳ ಹಾಗೂ ಸೌಕರ್ಯ ನೀಡುವ ದೃಷ್ಟಿಯಲ್ಲಿ ರಾಜ್ಯದಲ್ಲಿ ಸಮಗ್ರ ಉಪನ್ಯಾಸಕರ ಮತ್ತು ಸರಕಾರಿ ನೌಕರರ ವೇತನ ಪರಿಷ್ಕರಣಾ ಸಮಿತಿ ರಚಿಸಬೇಕೆಂದು ಇದೇ ಸಂದರ್ಭದಲ್ಲಿ ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.







