10ನೆ ತರಗತಿ ಉತ್ತರ ಪತ್ರಿಕೆ ಮೌಲ್ಯ ಮಾಪನಕ್ಕೆ ಶಿಕ್ಷಕರ ಒಪ್ಪಿಗೆ

ಮಡಿಕೇರಿ, ಎ.15: ವೇತನ ತಾರತಮ್ಯ ನಿವಾರಣೆಗಾಗಿ ಸರಕಾರ ಕುಮಾರ್ ನಾಯಕ್ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತಾರದಿದ್ದರೂ ಪ್ರೌಢಶಾಲಾ ಶಿಕ್ಷಕರ ಕೆಲವು ಬೇಡಿಕೆಗಳಿಗೆ ಸ್ಪಂದಿಸಿರುವ ಕಾರಣ ಎ. 18ರಿಂದ ಆರಂಭಗೊಳ್ಳುವ 10ನೆ ತರಗತಿ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಹಾಜರಾಗುವುದಾಗಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸಿ.ಟಿ. ಸೋಮಶೇಖರ್, ಪ್ರೌಢ ಶಾಲಾ ಸಹ ಶಿಕ್ಷಕರಿಗೆ ವೇತನ ಶ್ರೇಣಿಗೆ ಅನುಗುಣವಾಗಿ ಒಂದು ವಾರ್ಷಿಕ ಭಡ್ತಿ ನೀಡುವುದು ಮತ್ತು 2008ರ ನಂತರ ನೇಮಕಾತಿ ಹೊಂದಿದ ಎಲ್ಲಾ ಪ್ರೌಢಶಾಲಾ ಶಿಕ್ಷಕರಿಗೂ ವಿಶೇಷ ಭತ್ತೆಯನ್ನು ನೀಡಲು ಸರಕಾರ ಸಮ್ಮತಿ ಸೂಚಿಸಿರುವುದರಿಂದ ಮೌಲ್ಯಮಾಪನ ಬಹಿಷ್ಕಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದರು.
ಕುಮಾರ ನಾಯಕ್ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರುವ ಮೂಲಕ ವೇತನ ತಾರತಮ್ಯವನ್ನು ಹೋಗಲಾಡಿಸಬೇಕು ಎನ್ನುವ ಬೇಡಿಕೆಗೆ ಸರಕಾರ ಒಪ್ಪಿಗೆ ಸೂಚಿಸದಿದ್ದರೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮತ್ತು ರಾಜ್ಯ ಬರಗಾಲವನ್ನು ಎದುರಿಸುತ್ತಿರುವುದರಿಂದ ಮುಷ್ಕರವನ್ನು ಕೈಬಿಟ್ಟಿರುವುದಾಗಿ ಸೋಮಶೇಖರ್ ಸ್ಪಷ್ಟಪಡಿಸಿದ ಅವರು, ಎ. 18ರಿಂದ ಆರಂಭಗೊಳ್ಳುವ ಮೌಲ್ಯಮಾಪನದಲ್ಲಿ ಎಲ್ಲಾ ಶಿಕ್ಷಕರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಎಚ್.ಜಿ.ಕುಮಾರ್ ಮಾತನಾಡಿ, ಕುಮಾರ್ ನಾಯಕ್ ವರದಿ ಜಾರಿಗಾಗಿ ಒತ್ತಾಯಿಸಿ ಅನೇಕ ಪ್ರತಿಭಟನೆಗಳು ನಡೆದಿದ್ದರೂ ಸರಕಾರದಿಂದ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಶಿಕ್ಷಣ ಸಚಿವರೊಂದಿಗಿನ ಎರಡು ಸುತ್ತಿನ ಮಾತುಕತೆಯೂ ವಿಫಲವಾಗಿತ್ತು. ಆದರೆ, ಇತ್ತೀಚೆಗೆ ಸರಕಾರ ಶಿಕ್ಷಕರ ಎರಡು ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದ್ದು, ಇದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದಾರ್ಶಿ ಎಂ.ಟಿ.ದಯಾನಂದ ಪ್ರಕಾಶ್, ಮಡಿಕೇರಿ ತಾಲೂಕು ಪದಾಧಿಕಾರಿ ಶಾಂತರಾಜು ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷ ಮಹೇಶ್ ಉಪಸ್ಥಿತರಿದ್ದರು.







