ಸುಲ್ತಾನ್ ಅಝ್ಲಾನ್ ಷಾ ಕಪ್ ಹಾಕಿ ಟೂರ್ನಮೆಂಟ್ ; ಭಾರತ ಫೈನಲ್‌ಗೆ
ಮಲೇಷ್ಯಾ ವಿರುದ್ಧ ಭರ್ಜರಿ ಜಯ

ಇಪೊ, ಎ.15: ಇಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಮಲೇಷ್ಯಾವನ್ನು 6-1 ಅಂತರದಲ್ಲಿ ಮಣಿಸಿದ ಭಾರತ ಸುಲ್ತಾನ್ ಅಝ್ಲಾನ್ ಷಾ ಕಪ್ ಹಾಕಿ ಟೂರ್ನಮೆಂಟ್‌ನ ಫೈನಲ್ ಪ್ರವೇಶಿಸಿದೆ.
ಭಾರತ ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ.
ರಮಣದೀಪ್ ಸಿಂಗ್ ಎರಡು ಗೋಲು ದಾಖಲಿಸಿ ಭಾರತದ ಭರ್ಜರಿ ಗೆಲುವಿಗೆ ನೆರವಾದರು.
ಭಾರತಕ್ಕೆ ಫೈನಲ್ ತಲುಪಲು ಮಲೇಷ್ಯಾದ ವಿರುದ್ಧ ಗೆಲುವು ಅನಿವಾರ್ಯವಾಗಿತ್ತು. ಕಳೆದ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೋತ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿದ್ದ ಭಾರತ ಈ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿ ಜಯ ದಾಖಲಿಸಿತು.
ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ 6 ಪಂದ್ಯಗಳಲ್ಲಿ 18 ಅಂಕಗಳನ್ನು ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಭಾರತ 12 ಅಂಕಗಳೊಂದಿಗೆ ಎರಡನೆ ಸ್ಥಾನದೊಂದಿಗೆದಿಗೆ ಫೈನಲ್ ತಲುಪಿತು. ನ್ಯೂಝಿಲೆಂಡ್ 11 ಅಂಕ ಪಡೆದು ಫೈನಲ್ ಅವಕಾಶದಿಂದ ವಂಚಿತಗೊಂಡಿತು.
ಆಸ್ಟ್ರೇಲಿಯ 8 ಬಾರಿಪ್ರಶಸ್ತಿ ಜಯಿಸಿದೆ. ಕಳೆದ ಬಾರಿ ಅದು ನ್ಯೂಝಿಲೆಂಡ್‌ಗೆ ಶರಣಾಗಿ 9ನೆ ಬಾರಿ ಪ್ರಶಸ್ತಿ ಗೆಲ್ಲುವ ಅವಕಾಶ ವಂಚಿತಗೊಂಡಿತ್ತು. ಭಾರತ ಕಂಚು ಪಡೆದಿತ್ತು. ಈ ಬಾರಿ ನ್ಯೂಝಿಲೆಂಡ್‌ಗೆ ಕಂಚು ದೊರಯಲಿದೆ.
ಇಂದು ನಡೆದ ಪಂದ್ಯದಲ್ಲಿ ಭಾರತ 2ನೆ ನಿಮಿಷದಲ್ಲಿ ಗೋಲು ಖಾತೆ ತೆರೆದಿತ್ತು. ತಂಡದ ಎಸ್.ವಿ.ಸುನೀಲ್ 2ನೆ ನಿಮಿಷದಲ್ಲಿ ಗೋಲು ಕಬಳಿಸಿ ಭಾರತಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು.
7ನೆ ನಿಮಿಷದಲ್ಲಿ ಹರ್ಜಿತ್ ಸಿಂಗ್ ಗೋಲು ಜಮೆ ಮಾಡಿ 2-0 ಮುನ್ನಡೆಗೆ ನೆರವಾದರು. ರಮಣ್‌ದೀಪ್ ಸಿಂಗ್ 25 ಮತ್ತು 39ನೆ ನಿಮಿಷದಲ್ಲಿ ಸತತ ಎರಡು ಗೋಲುಗಳನ್ನು ತಂಡದ ಖಾತೆಗೆ ಜಮೆ ಮಾಡಿದರು. ದಾನಿಸ್ ಮುಜ್ತಬಾ 27ನೆ ನಿಮಿಷದಲ್ಲಿ ಮತ್ತು ತಲ್ವಿಂದರ್ ಸಿಂಗ್ 50ನೆ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾದರು.
ಮಲೇಷ್ಯಾದ ಪರ ಶಾಯ್‌ರ್ಲಿ ಸಾಬಾಹ್ 46ನೆ ನಿಮಿಷದಲ್ಲಿ ಏಕೈಕ ಗೋಲು ಗಳಿಸಲಷ್ಟೇ ಶಕ್ತರಾದರು.





