ಮಡಿವಾಳರು ಸೌಲಭ್ಯಗಳಿಂದ ವಂಚಿತ: ರಾಜು ತಲ್ಲೂರು
ಸೊರಬ, ಎ. 15: ವಚನ ಕ್ರಾಂತಿಯ ಹರಿಕಾರ ಬಸವಣ್ಣನವರ ಸಮಕಾಲೀನರಾದ ಮಡಿವಾಳ ಮಾಚಿದೇವರ ಜಯಂತಿಯನ್ನು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜನ್ಮದಿನದಂದೇ ಆಚರಿಸುತ್ತಿರುವುದು ಹೆಮ್ಮೆಯಾಗುತ್ತಿದೆ ಎಂದು ಮಾಚಿದೇವ ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ರಾಜು ಎಂ. ತಲ್ಲೂರು ಅಭಿಪ್ರಾಯಿಸಿದ್ದಾರೆ. ತಾಲೂಕಿನ ಕರಡಿಗೆರೆ ಗ್ರಾಮದ ಮಡಿವಾಳ ಭವನದಲ್ಲಿ ತಾಲೂಕು ಮಾಚಿದೇವ ಮಡಿವಾಳ ಸಂಘದಿಂದ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆಯುಳ್ಳ ಮಡಿವಾಳರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಶೋಷಣೆಗೆ ಒಳಗಾಗಿದ್ದಾರೆ. ಈ ಹಿಂದೆ ಮಾಚಿದೇವರ ಜಯಂತಿಯನ್ನು ಸರಕಾರದ ವತಿಯಿಂದ ರಜೆ ರಹಿತವಾಗಿ ಆಚರಿಸಲು ಘೋಷಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೇ, ಇಂದಿಗೂ ಸರಕಾರ ಘೋಷಣೆ ಮಾಡಿಲ್ಲ, ಆದ್ದರಿಂದ ಮಡಿವಾಳ ಸಮುದಾಯದಿಂದ ವತಿಯಿಂದ ಶೋಷಿತರ ಧ್ವನಿಯಾಗಿದ್ದ ಸಾಮಾಜಿಕ ಚಿಂತನೆಯ ಹರಿಕಾರ ಅಂಬೇಡ್ಕರ್ ಜಯಂತಿಯಂದೇ ದೇಶಾದ್ಯಂತ ಮಾಚಿದೇವರ ಜಯಂತಿಯನ್ನು ಆಚರಿಸಲಾಗುತ್ತಿದೆ ಎಂದರು. ಇತ್ತೀಚೆಗೆ ತಾಲೂಕಿನ ಬಡವರಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾಗಲೆಂದು ಉಚಿತ ಸ್ಫೂರ್ತಿ ಆ್ಯಂಬುಲೆನ್ಸ್ ವಾಹನವನ್ನು ಲೋಕಾರ್ಪಣೆ ಮಾಡಲಾಗಿತ್ತು. ಕೆಲ ತಾಂತ್ರಿಕ ಕಾರಣಗಳಿಂದ ಆ್ಯಂಬುಲೆನ್ಸ್ ಜನರ ಸೇವೆಗೆೆ ಸಿಗಲು ಕೆಲ ದಿನ ತಡವಾಗಿತ್ತು. ತಾಲೂ ಕಿನ ಜನರ ಆರೋಗ್ಯ ಸೇವೆಗಾಗಿ ದಿನದ 24ಗಂಟೆಗಳಲ್ಲಿ ಆ್ಯಂಬುಲೆನ್ಸ್ ಉಪಯೋಗ ಪಡೆದುಕೊಳ್ಳಲು ಮೊ: 99005 58877ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಿವೇಶನ ದಾನಿ ತುಳುಜಪ್ಪ, ಪ್ರಮುಖರಾದ ವೀರೇಶ್ ತಾಳಗುಪ್ಪ, ಮಂಜಪ್ಪ ಉಳವಿ, ವಿರುಪಾಕ್ಷಪ್ಪ, ಉಮೇಶ್ ವಕೀಲ, ವಿನಯ್, ಎಂ.ಪಿ ನಾಗರಾಜ, ರಾಮಪ್ಪ ವಕೀಲ ಮತ್ತಿತರರು ಉಪಸ್ಥಿತರಿದ್ದರು.





