ಜಗದೀಶ್ ಕಾರಂತ್‌ಗೆ ನಿರ್ಬಂಧ: ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
ಮಡಿಕೇರಿ.ಎ.15: ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಅವರ ಪ್ರವೇಶವನ್ನು ನಿರ್ಬಂಧಿಸಿದ ಕೊಡಗು ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಶಾಲಪ್ಪ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಜರಂಗದಳ ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಾರ್ಯವೈಖರಿಯ ವಿರುದ್ಧ ಘೋಷಣೆ ಕೂಗಿದರು.
ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಉಲ್ಲಾಸ್ ಮಾತನಾಡಿ, ಕೊಡಗಿನ ಶಾಂತಿಯನ್ನು ಕದಡುವ ನಿಟ್ಟಿನಲ್ಲಿ ಮತೀಯ ಶಕ್ತಿಗಳು ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದು, ಅದಕ್ಕೆ ಜಿಲ್ಲಾಡಳಿತ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ್ ಕಾರಂತ್ ಅವರ ಕೊಡಗು ಪ್ರವೇಶವನ್ನು ನಿರ್ಬಂಧಿಸಿರುವ ಹಿಂದೆ ಮತೀಯ ಶಕ್ತಿಗಳ ಕೈವಾಡವಿರುವ ಸಾಧ್ಯತೆಯಿದೆ. ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಜಿಲ್ಲಾಡಳಿತ ನಿರಂತರವಾಗಿ ಅಡ್ಡಿಯುಂಟು ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯ ನಂತರ ಹಿಂದೂಪರ ಸಂಘಟನೆಗಳ ಪ್ರಮುಖರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ಭೇಟಿ ಮಾಡಿ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದಮನಕಾರಿ ಪ್ರಯತ್ನಗಳ ಬಗ್ಗೆ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಮೈಸೂರು ವಿಭಾಗೀಯ ಸಂಚಾಲಕ ಜೀವನ್, ಬಜರಂಗ ದಳದ ಜಿಲ್ಲಾ ಸಹ ಸಂಚಾಲಕ ಚೇತನ್, ಪ್ರಮುಖರಾದ ಅಜಿತ್, ಮನು ಮಂಜುನಾಥ್, ಅರುಣ್ ಶೆಟ್ಟಿ, ಧನಂಜಯ್, ಮಹೇಶ್ ಜೈನ್, ಉಮೇಶ್ ಸುಬ್ರಹ್ಮಣಿ, ಮತ್ತಿತರರು ಉಪಸ್ಥಿತರಿದ್ದರು.







