ಮಂಗಳೂರು: ಅತ್ಯಾಚಾರ ಪ್ರಕರಣ - ಅಪರಾಧಿಗೆ 7 ವರ್ಷ ಜೈಲು
ಮಂಗಳೂರು: ವಿವಾಹಿತ ಮಹಿಳೆಯೊಬ್ಬರ ಮನೆಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಕರ್ಕರಬೆಟ್ಟು ನಿವಾಸಿ ಇಕ್ಬಾಲ್ (22) ಎಂಬಾತನಿಗೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
2014ರ ಮಾರ್ಚ್‌ನಲ್ಲಿ ಸಂತ್ರಸ್ತ ಮಹಿಳೆಯ ಪತಿ ಲಾರಿಗೆ ಲೋಡಿಂಗ್ ಮಾಡುವ ಕೆಲಸಕ್ಕೆ ಮನೆಯಿಂದ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಗೆ ಬಂದಿದ್ದ ಇಕ್ಬಾಲ್, ನೀರು ಕೇಳುವ ನೆಪದಲ್ಲಿ ಮನೆಯೊಳಕ್ಕೆ ನುಗ್ಗಿ ಅತ್ಯಾಚಾರ ಸಂತ್ರಸ್ತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಆ ಬಳಿಕೆ ಆಕೆಗೆ ಯಾರಿಗೂ ಹೇಳದಂತೆ ಜೀವಬೆದರಿಕೆ ಒಡ್ಡಿದ್ದ. ಘಟನೆಯ ನಡೆದ ಬಳಿಕ ಸಂತ್ರಸ್ತ ಮಹಿಳೆ ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಪತಿ ಮನೆಗೆ ಬಂದು ಪತ್ನಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಬೆಳ್ತಂಗಡಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಧೀಶ ಡಿ.ಪುಟ್ಟರಂಗಸ್ವಾಮಿ ಅವರು, ಅತ್ಯಾಚಾರ ಪ್ರಕರಣದಲ್ಲಿ ಇಕ್ಬಾಲ್ ತಪ್ಪಿತಸ್ಥ ಎಂದು ಬುಧವಾರ ಆದೇಶ ಹೊರಡಿಸಿ ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದರು.
ಪ್ರಾಸಿಕ್ಯೂಷನ್ ಮತ್ತು ಆರೋಪಿ ಪರ ವಕೀಲರ ವಾದ ಆಲಿಸಿದ ಬಳಿಕ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ನ್ಯಾಯಾಧೀಶರು, ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವುದಕ್ಕಾಗಿ ಇಕ್ಬಾಲ್‌ನಿಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಸನ್ 376ರ ಅಡಿಯಲ್ಲಿ ಏಳು ವರ್ಷ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದರು. ಮಹಿಳೆಯ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 448ರ ಅಡಿಯಲ್ಲಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದಂಡದ ಮೊತ್ತದಲ್ಲಿ 8,000ರೂ.ವನ್ನು ಸಂತ್ರಸ್ತ ಮಹಿಳೆಗೆ ಪಾವತಿಸಬೇಕು. ಸಂತ್ರಸ್ತಗೆ ರಾಜ್ಯ ಸರಕಾರದ ಸಂತ್ರಸ್ತರ ನಿಧಿಯಿಂದ ಪರಿಹಾರ ವಿತರಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ. ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸಾತಿ ವಾದಿಸಿದ್ದರು.







