ದೇಶದಲ್ಲಿ ಅಸ್ಪಶ್ಯತೆಯಿಂದ ಮುಕ್ತಗೊಂಡ ಒಂದೂ ಗ್ರಾಮವಿಲ್ಲ: ಎಲ್.ಹನುಮಂತಯ್ಯ

ಬೆಂಗಳೂರು, ಎ.15: ದೇಶದ ಯಾವುದೇ ಒಂದು ಹಳ್ಳಿಯೂ ಅಸ್ಪಶ್ಯತೆ ಆಚರಣೆಯಿಂದ ಮುಕ್ತವಾಗಿಲ್ಲ. ಪ್ರತಿನಿತ್ಯ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಲೇ ಇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವತಿಯಿಂದ ಧನ್ವಂತರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯ ಸ್ವಾತಂತ್ರ, ಸಮಾನತೆ, ಭ್ರಾತೃತ್ವವಾಗಿದೆ. ಆದರೆ, ಇಂದಿಗೂ ದೇಶದ ದಲಿತ, ಹಿಂದುಳಿದ ಸಮುದಾಯದ ಬಹುತೇಕ ಕುಟುಂಬಗಳು ಸೂರಿಲ್ಲದೆ ಬೀದಿಯಲ್ಲಿ ವಾಸ ಮಾಡುತ್ತಿದ್ದಾರೆ. ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಇದನ್ನು ಗಮನಿಸಿದರೆ ನಮಗೆ ಸ್ವಾತಂತ್ರ ಬಂದಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಮೇರಿಕದಲ್ಲಿರುವ ವಿಶ್ವಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್‌ರವರ ಜನ್ಮ ದಿನಾಚರಣೆಯನ್ನು ‘ವಿಶ್ವ ಜ್ಞಾನದ ದಿನಾಚರಣೆ’ಯನ್ನಾಗಿ ಆಚರಿಸುತ್ತಿದೆ. ಆದರೆ, ಭಾರತದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಂಬೇಡ್ಕರ್‌ರವರನ್ನು ಕೇವಲ ಜಾತಿಗೆ ಸೀಮಿತಗೊಳಿಸಿದ್ದಾರೆ ಎಂದು ಡಾ.ಎಲ್.ಹುನುಮಂತಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು, ವಿಧವಾ ವಿವಾಹ ಸೇರಿದಂತೆ ಹಲವು ಸುಧಾರಣೆಗಳನ್ನು ತರಲು ಡಾ.ಅಂಬೇಡ್ಕರ್ ಸಂಸತ್‌ನಲ್ಲಿ ‘ಹಿಂದೂ ಕೋಡ್ ಬಿಲ್’ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯನ್ನು ಸಂಸತ್‌ನಲ್ಲಿದ್ದ ಜಾತಿ ಮನಸ್ಸುಗಳು ಒಪ್ಪಿಕೊಂಡಿಲ್ಲ. ಇದರಿಂದ ಬೇಸರಗೊಂಡ ಅಂಬೇಡ್ಕರ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಎಂದು ಅವರು ಸ್ಮರಿಸಿದರು.
ಪ್ರಸ್ತುತ ದೇಶದ ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಅಂಬೇಡ್ಕರ್ ಸಿದ್ಧಾಂತವೆ ಪರಿಹಾರ. ದೇಶದ ಭೂಮಿ ಹಾಗೂ ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿಕೊಂಡು, ಎಲ್ಲರಿಗೂ ಸಮಾನವಾಗಿ ಹಂಚುವ ಮೂಲಕ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕಂಕಣ ಬದ್ಧರಾಗಬೇಕು ಎಂಬುದು ಅಂಬೇಡ್ಕರ್‌ರವರ ಆಶಯವಾಗಿತ್ತು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ಕುಲಪತಿ ರವೀಂದ್ರನಾಥ್, ಕುಲಸಚಿವ ನಾಗರಾಜು ಮತ್ತಿತರರಿದ್ದರು.





