ಡಾ.ರಾಜ್‌ರನ್ನು ದೇವರನ್ನಾಗಿಸಲು ಬಿಡಬಾರದು: ಬರಗೂರು
ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಸಮಾವೇಶ-2016

ಬೆಂಗಳೂರು, ಎ.15: ಡಾ.ರಾಜ್‌ಕುಮಾರ್ ಅವರನ್ನು ದೇವರನ್ನಾಗಿಸುವ ಮೂಲಕ ಅವರ ವ್ಯಕ್ತಿತ್ವವನ್ನು ಜನಸಾಮಾನ್ಯರಿಂದ ದೂರ ಸರಿಸುವಂತಹ ಹುನ್ನಾರ ನಡೆಯು ತ್ತಿದೆ. ಹೀಗಾಗಿ ರಾಜ್‌ಕುಮಾರ್ ಅವರನ್ನು ದೇವರನ್ನಾಗಿಸಲು ಅಭಿಮಾನಿಗಳು ಬಿಡಬಾರದು ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಶುಕ್ರವಾರ ಕನ್ನಡ ಜನಶಕ್ತಿ ಕೇಂದ್ರ ನಗರದ ಕಸಾಪದಲ್ಲಿ ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಸಾಂಸ್ಕೃತಿಕ ಸಮಾವೇಶ-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಡಾ.ರಾಜ್‌ಕುಮಾರ್ ರಂಗಭೂಮಿ ಹಾಗೂ ಸಿನೆಮಾ ರಂಗದ ಮೂಲಕ ಮೇರು ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅವರ ನಡೆನುಡಿ ಪ್ರತಿಯೊಬ್ಬರಿಗೂ ಆದರ್ಶವಾದದ್ದಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಮೂಲಭೂತವಾದಿಗಳು ಅವರಿಗೆ ದೇವಸ್ಥಾನ ಕಟ್ಟಿಸಿ, ಆ ಮೂಲಕ ಹಣ ಮಾಡುವ ಹುನ್ನಾರಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರಕವಿ ಕುವೆಂಪು ಹಾಗೂ ರಾಜ್‌ಕುಮಾರ್ ಇವರಿಬ್ಬರು ರಾಜ್ಯದ ಸಾಂಸ್ಕೃತಿಕ ನಾಯಕರು. ಕುವೆಂಪು ಸಾಹಿತ್ಯ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡುತ್ತಲೆ, ಅದನ್ನು ಮೀರಿ ಬೆಳೆದವರು. ಹಾಗೆಯೆ ಡಾ.ರಾಜ್‌ಕುಮಾರ್ ತಮ್ಮ ಸಿನಿಮಾ ರಂಗವನ್ನು ಮೀರಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಹೀಗಾಗಿ ನಾಡಿನ ಜನತೆಗೆ ಇವರಿಬ್ಬರ ಬದುಕು ಆದರ್ಶ ಪ್ರಾಯವಾದದ್ದು ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಶ್ರಮ ಹಾಗೂ ಶ್ರದ್ಧೆಯಿದ್ದರೆ ಒಬ್ಬ ಸಾಮಾನ್ಯ ವ್ಯಕ್ತಿಯೂ ಸಹ ಮಹತ್ತರವಾದದ್ದನ್ನು ಸಾಧನೆ ಮಾಡಬಹುದು ಎನ್ನುವುದಕ್ಕೆ ಡಾ.ರಾಜ್‌ಕುಮಾರ್‌ರವರನ್ನು ಉದಾಹರಣೆಯಾಗಿ ಕೊಡಬಹುದು. ಅವರಿಗೆ ಜಾತಿ, ಹಣ ಹಾಗೂ ವಿದ್ಯಾಭ್ಯಾಸದ ಬಲವಿರದಿದ್ದರೂ ತನ್ನ ನಟನೆಯ ಮೂಲಕ ಎಲ್ಲ ಶಕ್ತಿಯನ್ನು ಗಳಿಸಿಕೊಂಡರು ಎಂದು ಅವರು ಅಭಿಮಾನಪಟ್ಟರು.
ಡಾ.ರಾಜ್‌ಕುಮಾರ್ ಹಲವು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಲವು ಸಂಘ ಸಂಸ್ಥೆಗಳಿಗೆ ಹಣ ಸಹಾಯ ಮಾಡಿದ್ದಾರೆ. ಆದರೆ, ಇದ್ಯಾವುದನ್ನು ಪ್ರಚಾರ ಮಾಡಿಕೊಳ್ಳುವಂತಹ ಸ್ವಾರ್ಥ ಮನಸ್ಥಿತಿ ಅವರದಾಗಿರಲಿಲ್ಲ. ಬಲಗೈಯಲ್ಲಿ ಕೊಟ್ಟಿದ್ದನ್ನು, ಎಡಗೈಗೆ ತಿಳಿಯಬಾರದೆಂಬ ವ್ಯಕ್ತಿತ್ವ ಅವರದಾಗಿತ್ತು ಎಂದು ಅವರು ರಾಜ್‌ಕುಮಾರ್ ವ್ಯಕ್ತಿತ್ವವನ್ನು ಬಣ್ಣಿಸಿದರು.
ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷ ಶೇಖ್ ಮಾಸ್ತರ್ ಮಾತನಾಡಿ, ಡಾ.ರಾಜ್‌ಕುಮಾರ್ ಕನ್ನಡ ರಂಗಭೂಮಿಯಲ್ಲಿ ಪಳಗಿದ ಪ್ರತಿಭೆ. ರಂಗಭೂಮಿ ಎಂತೆಂತಹ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂಬುದಕ್ಕೆ ಡಾ.ರಾಜ್‌ಕುಮಾರ್ ಉದಾಹರಣೆಯಾಗಿ ನಿಲ್ಲುತ್ತಾರೆ ಎಂದು ತಿಳಿಸಿದರು.
ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ.ರಾಮೇಗೌಡ ಮಾತನಾಡಿ, ಡಾ.ರಾಜ್‌ಕುಮಾರ್ ಕೇವಲ ಕಲಾವಿದ ಮಾತ್ರ ಆಗಿರಲಿಲ್ಲ. ರಾಜ್ಯದ ಹಲವು ಸಮಸ್ಯೆಗಳಿಗೆ ಧ್ವನಿಯಾಗಿದ್ದರು. ಗೋಕಾಕ್ ಚಳವಳಿಯಲ್ಲಿ ಭಾಗವಹಿಸುವ ಮೂಲಕ ಕನ್ನಡ ನಾಡು, ನುಡಿಯ ಉಳಿವಿಗೆ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ತೋರಿಸಿಕೊಟ್ಟರು ಎಂದು ಸ್ಮರಿಸಿದರು.





