ವಿಶ್ವಸಂಸ್ಥೆಯಲ್ಲಿ ಚೀನಾದ ಗುಪ್ತ ವೀಟೊ ಪ್ರಯೋಗಕ್ಕೆ ಭಾರತ ಆಕ್ರೋಶ

ವಿಶ್ವಸಂಸ್ಥೆ, ಎ.15: ಪಾಕ್ ಮೂಲದ ಉಗ್ರಗಾಮಿ ಗುಂಪು ಜೈಶೆ ಮುಹಮ್ಮದ್‌ನ ವರಿಷ್ಠ ಮಸೂದ್ ಅಝರ್ ವಿರುದ್ಧ ನಿಷೇಧ ಹೇರಲು ವಿಶ್ವಸಂಸ್ಥೆಯಲ್ಲಿ ತಾನು ನಡೆಸಿದ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದ ಚೀನಾವನ್ನು ಭಾರತ ಪರೋಕ್ಷವಾಗಿ ಟೀಕಿಸಿದೆ. ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿಯಲ್ಲಿ ‘ಗುಪ್ತ ವೀಟೊ’ ಮತದಾನ ಬಳಕೆಗೆ ಅದು ತೀವ್ರ ವಿರೋಧ ವ್ಯಕ್ತಪಡಿಸಿದೆ. ಭಯೋತ್ಪಾದಕರ ವಿರುದ್ಧ ನಿರ್ಬಂಧಗಳನ್ನು ಹೇರಬೇಕೆಂಬ ಮನವಿಯನ್ನು ಯಾವ ಕಾರಣಕ್ಕಾಗಿ ತಿರಸ್ಕರಿಸಲಾಯಿತೆಂಬುದಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸದಸ್ಯರಿಗೆ ಮಾಹಿತಿ ನೀಡಬೇಕೆಂದು ಅದು ಆಗ್ರಹಿಸಿದೆ.
ಅಲ್‌ಖಾಯಿದ, ತಾಲಿಬಾನ್ ಹಾಗೂ ಐಸಿಸ್ ವಿರುದ್ಧದ ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಗಳ ಕಾರ್ಯನಿರ್ವಹಣೆಯನ್ನು ಪುನರ್‌ಪರಿಶೀಲಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾದ ಸೈಯದ್ ಅಕ್ಬರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಗುರುವಾರ ‘ಭಯೋತ್ಪಾದಕ ಕೃತ್ಯಗಳಿಂದಾಗಿ ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಗೆ ಧಕ್ಕೆ’ ಕುರಿತ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪಠಾಣ್‌ಕೋಟ್ ದಾಳಿ ಪ್ರಕರಣದ ಸೂತ್ರಧಾರಿಯೆನ್ನಲಾದ ಮಸೂದ್ ಅಝರ್‌ಗೆ ನಿಷೇಧ ವಿಧಿಸುವ ಭಾರತದ ಪ್ರಯತ್ನಕ್ಕೆ ಕಳೆದ ತಿಂಗಳು ಚೀನಾ ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿಯಲ್ಲಿ ವೀಟೊ ಪ್ರಯೋಗಿಸುವ ಮೂಲಕ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಸ್ತುತ ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿಯಲ್ಲಿ ತಲಾ 15 ಸದಸ್ಯರು ವೀಟೊ ಅಧಿಕಾರವನ್ನು ಹೊಂದಿದ್ದಾರೆದು ಹೇಳಿದರು. ಈ ಹದಿನೈದು ಮಂದಿ ಸದಸ್ಯರ ಹೊರತಾಗಿ, ವೀಟೊ ಪ್ರಯೋಗಿಸಿದವರು ಯಾರೆಂಬುದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸದಸ್ಯರಿಗೆ ತಿಳಿಸದಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
‘‘ನಿರ್ಬಂಧಗಳ ಸಮಿತಿ ಸಭೆಯಲ್ಲಿ ಭಯೋತ್ಪಾದಕರನ್ನು ಪಟ್ಟಿ ಮಾಡುವ ಮನವಿಯನ್ನು ಯಾಕೆ ಪುರಸ್ಕರಿಸಲಿಲ್ಲ ವೆಂಬುದನ್ನು ವಿಶ್ವಸಂಸ್ಥೆಯ ಸಾಮಾನ್ಯ ಸದಸ್ಯರಿಗೆ ಔಪಚಾರಿಕವಾಗಿ ಮಾಹಿತಿಯನ್ನು ನೀಡಲಾಗುತ್ತಿಲ್ಲ.ಅಂತಾರಾಷ್ಟ್ರೀಯ ಸಮುದಾಯದ ಪರವಾಗಿ ಕಾರ್ಯಾಚರಿಸುವ ನಿರ್ಬಂಧಗಳ ಸಮಿತಿಗಳು ಪರಸ್ಪರ ವಿಶ್ವಾಸವನ್ನು ಸೃಷ್ಟಿಸಬೇಕೇ ಹೊರತು ಗುಪ್ತಮತದಾನವನ್ನು ಬಳಸಿಕೊಂಡು ನಿರ್ಭಯ ವಾತಾವರಣಕ್ಕೆ ಅಪಾಯವನ್ನು ತಂದೊಡ್ಡಬಾರದು ಎಂದು ಅಕ್ಬರುದ್ದೀನ್ ಹೇಳಿದ್ದಾರೆ.







