‘ಸಮಾನತೆಯೆಡೆಗೆ ಮಹಾಯಾನ’ ವಿಶೇಷ ಕಾರ್ಯಕ್ರಮ
ಅಂಬೇಡ್ಕರ್ 125ನೆ ಜಯಂತಿ
ಬೆಂಗಳೂರು, ಎ.15: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 125ನೆ ಜಯಂತಿ ಅಂಗವಾಗಿ 2016ರ ಎಪ್ರಿಲ್‌ನಿಂದ 2017ರ ಮಾರ್ಚ್‌ವರೆಗೂ ರಾಜ್ಯಾದ್ಯಂತ ‘ಸಮಾನತೆಯೆಡೆಗೆ ಮಹಾಯಾನ’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದಸಂಸ ಒಕ್ಕೂಟದ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಹೇಳಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಮಾನತೆಯೆಡೆಗೆ ಮಹಾಯಾನ ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮವನ್ನು ಪ್ರತಿ ತಾಲೂಕು ಮತ್ತು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ವರ್ಷಪೂರ್ತಿ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ವಿಚಾರಸಂಕಿರಣ, ಕಲಾಪ್ರದರ್ಶನ, ಸಾಹಿತ್ಯಗೋಷ್ಠಿ, ನಾಟಕ ಪ್ರದರ್ಶನಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಅಂಬೇಡ್ಕರ್‌ರವರ 125ರ ಜಯಂತಿಯನ್ನು ವೈಚಾರಿಕತೆಯಡಿಯಲ್ಲಿ ಆಚರಣೆ ಮಾಡಲು ಚಿಂತಿಸಲಾಗಿದೆ. ಹೀಗಾಗಿ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ರಾಂತಿಕಾರಿ ವಿಚಾರಧಾರೆಗಳನ್ನು ಜನರಿಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಇತ್ತೀಚೆಗೆ ಬಿಜೆಪಿ ಮತ್ತು ಸಂಘಪರಿವಾರ ಅಂಬೇಡ್ಕರ್‌ರನ್ನು ಹಿಂದುತ್ವದ ಪ್ರತಿಪಾದ ಕರೆಂದು ಗುರುತಿಸುವ ಮೂಲಕ ಹೈಜಾಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಅಂಬೇಡ್ಕರ್ ಹಿಂದುತ್ವವಾದಿಯಲ್ಲ ಮಾನವತಾವಾದಿಯಾಗಿದ್ದರು ಎಂದು ಪ್ರತಿಪಾದಿಸಿದರು. ಗೋಷ್ಠಿಯಲ್ಲಿ ಸಂಚಾಲಕರಾದ ಲಕ್ಷ್ಮೀನಾರಾಯಣ ನಾಗಾವಾರ, ಎಚ್.ಸಿ.ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.





