ಕರ್ತವ್ಯಲೋಪ: ಇಂಜಿನಿಯರ್‌ಗಳಿಬ್ಬರ ಅಮಾನತು
ಬೆಂಗಳೂರು, ಎ.15: ಬಿಬಿಎಂಪಿ ವ್ಯಾಪ್ತಿಯ ನಗರೋತ್ಥಾನ ಯೋಜನೆಯಡಿ ಪೂರ್ಣಗೊಂಡಿರುವ ಪಾದಚಾರಿ ಮಾರ್ಗದಲ್ಲಿ ಕಟ್ಟಡ ಸಾಮಗ್ರಿಗಳನ್ನು ತೆರವುಗೊಳಿಸದೆ ನಿರ್ಲಕ್ಷ ವಹಿಸಿರುವ ಇಂಜಿನಿಯರ್‌ಗಳಿಬ್ಬರನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಮಾನತುಗೊಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ನಗರೋತ್ಥಾನ ಯೋಜನೆಯ ಕಾರ್ಯವೈಖರಿ ಮತ್ತು ಟೆಂಡರ್ ಶ್ಯೂರ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪರಿಶೀಲನೆಯನ್ನು ನಡೆಸಿದ ಸಚಿವ ಜಾರ್ಜ್, ನಗರದಲ್ಲಿ ಪಾದಚಾರಿ ಮಾರ್ಗಗಳ ಕಳಪೆ ಕಾಮಗಾರಿ ಕಂಡು ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಅಮಾನತು ಪಡಿಸುವಂತೆ ಸ್ಥಳದಲ್ಲಿಯೇ ಆದೇಶ ನೀಡಿದರು. ಎ.ಈ.ಕೇಶವಮೂರ್ತಿ ಮತ್ತು ಎ.ದೇವರಾಜುಲು ಎಂಬ ಇಬ್ಬರು ಇಂಜಿನಿಯರ್‌ಗಳ ಗೈರುಹಾಜರನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೂಡಲೇ ಮುಖ್ಯ ಇಂಜಿನಿಯರ್ ಗೋವಿಂದರಾಜು ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಸೂಚಿಸಿದರು. ಅದೇ ರೀತಿ, ಕೆ.ಜಿ.ಕೆಂಪೇಗೌಡ ರಸ್ತೆಯಲ್ಲಿ ಟೆಂಡರ್ ಶ್ಯೂರ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಪರಿಶೀಲಿಸಿದ ಜಾರ್ಜ್ ಈ ತಿಂಗಳ ಅಂತ್ಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ನಗರದ ಪ್ರಮುಖ ಭಾಗವಾಗಿರುವ ರೆಸಿಡೆನ್ಸಿ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದರೂ ಮತ್ತೆ ರಸ್ತೆಯನ್ನು ಅಗೆದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಟೆಂಡರ್ ಶ್ಯೂರ್ ಯೋಜನೆ ಪೂರ್ಣಗೊಂಡ ಬಳಿಕ ರಸ್ತೆಯನ್ನು ಅಗೆಯುವ ಕೆಲಸ ಏಕೆ ಎಂದು ಇಂಜಿನಿಯರ್‌ಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸರ್.ಸಿ.ವಿ.ರಾಮನ್ ಜಂಕ್ಷನ್‌ನಲ್ಲಿ ರಸ್ತೆ ಕಾಮಗಾರಿ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದ್ದರೂ ಬಿಬಿಎಂಪಿ ಇಂಜಿನಿಯರ್ ಗಳು ಮೇಲ್ವಿಚಾರಣೆ ನಡೆಸಬೇಕು. ಕಾಮಗಾರಿಗಳ ಬಗ್ಗೆ ನಿಗಾ ವಹಿಸಬೇಕೆಂದು ಇದೇ ವೇಳೆ ಜಾರ್ಜ್ ಸೂಚಿಸಿದರು.
ಜಲಮಂಡಳಿ ಅಧಿಕಾರಿಗಳ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಸಚಿವ ಜಾರ್ಜ್, ಟೆಂಡರ್‌ಶ್ಯೂರ್ ಯೋಜನೆಯಡಿ ಅಭಿವೃದ್ಧಿ ಪಡಿಸಿದ ರಸ್ತೆಯನ್ನು ಅಗೆದು ಹಾಳು ಮಾಡಿದಿರಲ್ಲಾ ಇದಕ್ಕೆ ಯಾರು ಹೊಣೆ ಎಂದು ಖಾರವಾಗಿ ಪ್ರಶ್ನಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು ಈ ರಸ್ತೆ ಇನ್ನು ಬಿಬಿಎಂಪಿಗೆ ಹಸ್ತಾಂತರಗೊಂಡಿಲ್ಲ. ಹಾಗಾಗಿ ಇದರ ನಷ್ಟವನ್ನು ಗುತ್ತಿಗೆದಾರರೇ ಭರಿಸುತ್ತಾರೆ ಎಂದು ವಿವರ ನೀಡಿದರು.
ಪರಿಶೀಲನೆ ವೇಳೆಯಲ್ಲಿ ಪಾದಚಾರಿ ರಸ್ತೆ ಬಳಿಯಿದ್ದ ಕಸದ ರಾಶಿಯನ್ನು ಕಂಡು ಮೇಯರ್ ಮಂಜುನಾಥ ರೆಡ್ಡಿಯವರು ಕೂಡಲೇ ಕಸ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಸೂಚಿಸಿದರು. ಕಟ್ಟಪ್ಪಣೆ ಮಾಡಿದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಸತ್ಯನಾರಾಯಣ ಸೇರಿ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.





