ರಾ.ಹೆದ್ದಾರಿಗಳಲ್ಲಿನ ಹಂಪ್ಸ್‌ಗಳಿಗೆ ತಡೆ: ರಸ್ತೆ ಸಾರಿಗೆ ಸಚಿವಾಲಯದ ಆದೇಶ

ಹೊಸದಿಲ್ಲಿ, ಎ.15: ಹೆದ್ದಾರಿಗಳಲ್ಲಿರುವ ಎಲ್ಲ ವೇಗತಡೆಗಳನ್ನು ತೆಗೆದು ಹಾಕುವಂತೆ ರಸ್ತೆ ಸಾರಿಗೆ ಸಚಿವಾಲಯವು ರಾಜ್ಯ ಸರಕಾರಗಳು ಹಾಗೂ ಎನ್‌ಎಚ್‌ಎಐ, ರಾಜ್ಯ ಪಿಡಬ್ಲೂಡಿಗಳು ಮತ್ತು ಬಿಆರ್‌ಒದಂತಹ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಈ ವೇಗತಡೆಗಳು ಹೆದ್ದಾರಿಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುವ ಜೊತೆಗೆ ಸುರಕ್ಷತೆಗೂ ಅಪಾಯವನ್ನೊಡ್ಡುತ್ತಿವೆ.
ಮುಂದಿನ ಬುಧವಾರದೊಳಗೆ ಈ ಸಂಬಂಧ ಕೈಗೊಳ್ಳಲಾದ ಕ್ರಮಗಳ ವಿವರಗಳನ್ನು ಸಲ್ಲಿಸುವಂತೆ ಸಚಿವಾಲಯವು ಸೂಚಿಸಿದೆ. ಅನುಮತಿ ಪಡೆದುಕೊಂಡು ಹಾಕಲಾಗಿರುವ ರಂಬಲ್ ಸ್ಟ್ರಿಪ್‌ಗಳ ವಿವರಗಳನ್ನೂ ಅದು ಕೋರಿದೆ.
ಸಚಿವಾಲಯವು ಪ್ರಕಟಸಿರುವ ರಸ್ತೆ ಅಪಘಾತ ವರದಿ(2014)ಯಂತೆ,ರಸ್ತೆ ಉಬ್ಬುಗಳಿಂದಾಗಿ ಸಂಭವಿಸಿರುವ ಅಪಘಾತಗಳಲ್ಲಿ 4,726 ಜನರು ಪ್ರಾಣಗಳನ್ನು ಕಳೆದುಕೊಂಡಿದ್ದರೆ ಹೊಂಡಗಳು ಮತ್ತು ವೇಗತಡೆಗಳಿಗೆ 6,672 ಜೀವಗಳು ಬಲಿಯಾಗಿವೆ.
ನಿಗದಿತ ಮಾರ್ಗಸೂಚಿಗಳು ಅಸ್ತಿತ್ವದಲ್ಲಿದ್ದರೂ ಹಲವೆಡೆಗಳಲ್ಲಿ ಸ್ಥಳೀಯ ಅಧಿಕಾರಿಗಳು ವಾಹನಗಳ ವೇಗವನ್ನು ನಿಯಂತ್ರಿಸಲು ರಸ್ತೆ ಉಬ್ಬುಗಳು ಅಥವಾ ವೇಗ ತಡೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ತನ್ನ ಇತ್ತೀಚಿನ ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಸಚಿವಾಲಯವು,ವಾಹನ ಸಂಚಾರವನ್ನು ಸುಗಮವಾಗಿಸುವುದು ರಾಷ್ಟ್ರೀಯ ಹೆದ್ದಾರಿಗಳ ಉದ್ದೇಶವಾಗಿರುವುದರಿಂದ ಇದು ಅಪೇಕ್ಷಣೀಯವಲ್ಲ. ವೇಗತಡೆಗಳು ವೇಗವಾಗಿ ಸಂಚರಿಸುವ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತವೆ ಎಂದು ಹೇಳಿದೆ.
ತನ್ನ ಹಿಂದಿನ ಸುತ್ತೋಲೆಗಳನ್ನು ಉಲ್ಲೇಖಿಸಿರುವ ಅದು,ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೇಗ ನಿಯಂತ್ರಣವು ಅನಿವಾರ್ಯವಾಗಿರುವ ಲೆವೆಲ್ ಕ್ರಾಸಿಂಗ್‌ಗಳಲ್ಲಿನ ಕಡಿದಾದ ತಿರುವುಗಳಂತಹ ಸ್ಥಳಗಳಲ್ಲಿ ಅಥವಾ ಇಕ್ಕಟ್ಟಾದ ಮತ್ತು ಪದೇ ಪದೇ ಅಪಘಾತಗಳು ಸಂಭವಿಸುವ ಪ್ರದೇಶಗಳಲ್ಲಿ ಸೂಕ್ತವಾಗಿ ವಿನ್ಯಾಸಗೊಳಿಸಲಾದ ರಂಬಲ್ ಸ್ಟ್ರಿಪ್‌ಗಳ ಅಳವಡಿಕೆಗೆ ಅವು ಶಿಫಾರಸುಗಳನ್ನು ಮಾಡಿವೆ. ಆದರೆ ಇಂತಹ ರಂಬಲ್ ಸ್ಟ್ರಿಪ್‌ಗಳನ್ನು ಮನಬಂದಂತೆ ನಿರ್ಮಿಸುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಹೇಳಿದೆ. ಇಂತಹ ಸಂಚಾರ ನಿಯಂತ್ರಣ ಕ್ರಮಗಳ ತಾಣಗಳಿಗೆ ಹೆದ್ದಾರಿ ಏಜೆನ್ಸಿಗಳ ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದೆ.
ಪಾದಚಾರಿಗಳು ಅಪಾಯಕ್ಕೆ ಸಿಲುಕುವುದನ್ನು ತಡೆಯಲು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓವರ್ ಬ್ರಿಡ್ಜ್‌ಗಳು ಅಥವಾ ಅಂಡರ್‌ಪಾಸ್‌ಗಳ ನಿರ್ಮಾಣ ಸಾಧ್ಯತೆಯತ್ತ ಗಮನ ಹರಿಸುವಂತೆಯೂ ಸಚಿವಾಲಯವು ಸೂಚಿಸಿದೆ.







