ಮಾತುಕತೆ ಪುನಾರಂಭಕ್ಕೆ ಭಾರತ ಹಿಂದೇಟು: ಪಾಕ್ ಆರೋಪ

ನ್ಯೂಯಾರ್ಕ್, ಎ.15: ಪಾಕಿಸ್ತಾನದ ಜೊತೆ ಸಮಗ್ರ ಮಾತುಕತೆಯನ್ನು ಪುನಾರಂಭಿಸಲು ಭಾರತವು ತಾನಾಗಿ ಮುಂದೆ ಬರುತ್ತಿಲ್ಲ ಎಂದು ವಿಶ್ವಸಂಸ್ಥೆಯಲ್ಲಿನ ಪಾಕ್ ರಾಯಭಾರಿ ಮಲೀಹಾ ಲೋಧಿ ಆಪಾದಿಸಿದ್ದಾರೆ. ಈ ರೀತಿಯ ಪ್ರವೃತ್ತಿಯು ಉಭಯರಾಷ್ಟ್ರಗಳ ಬಾಂಧವ್ಯಗಳನ್ನು ಸಹಜಗೊಳಿಸುವ ಸಾಧ್ಯತೆಗಳಿಗೆ ಅಡ್ಡಿಯುಂಟು ಮಾಡುವುದಾಗಿ ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಅಧಿಕಾರಕ್ಕೇರಿದ ಬಳಿಕ ಭಾರತ-ಪಾಕ್ ಬಾಂಧವ್ಯ ಸುಧಾರಣೆಯಲ್ಲಿ ಸಕಾರಾತ್ಮಕ ಆರಂಭ ಕಂಡುಬಂದಿತ್ತಾ ದರೂ, ಆನಂತರ ಭಾರತವು ಕುಂಟು ನೆಪವೊಡ್ಡಿ ಹಾಗೂ ಅಸ್ವೀಕಾರಾರ್ಹವಾದ ಪೂರ್ವಶರತ್ತುಗಳನ್ನು ಮುಂದಿಟ್ಟು ಮಾತುಕತೆಗಳನ್ನು ರದ್ದುಪಡಿಸಿತೆಂದು ಲೋಧಿ ಆಪಾದಿಸಿದ್ದಾರೆ. ಅವರು ಕಳೆದ ವಾರ ಅಮೆರಿಕ ಸೇನಾ ಕಾಲೇಜ್‌ನ ವಿದ್ಯಾರ್ಥಿ ಗಳು ಹಾಗೂ ಬೋಧಕವರ್ಗದ ತಂಡ ಜೊತೆ ಮಾತನಾಡುತ್ತಿ ದ್ದಾಗ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಪ್ಘಾನಿಸ್ತಾನದಲ್ಲಿ ಶಾಂತಿ ಹಾಗೂ ಭದ್ರತೆಗೆ ಉತ್ತೇಜನ, ನನೆಗುದಿಯಲ್ಲಿರುವ ವಿವಾದಗಳನ್ನು ಇತ್ಯರ್ಥಪಡಿಸುವ ಮೂಲಕ ಭಾರತದ ಜೊತೆಗಿನ ಬಾಂಧವ್ಯಗಳನ್ನು ಸಹಜಗೊಳಿಸುವುದು ಸೇರಿದಂತೆ ಭಯೋತ್ಪಾದನೆಯ ಪರಾಭವ, ಆರ್ಥಿಕತೆಯ ಬೆಳವಣಿಗೆ ಹಾಗೂ ಶಾಂತಿಯುತ ನೆರೆಹೊರೆಯ ನಿರ್ಮಾಣ ಪಾಕಿಸ್ತಾನದ ಆದ್ಯತೆಗಳಾಗಿವೆ ಎಂದು ಲೋಧಿ ತಿಳಿಸಿದರು. ಚೀನಾದ ಜೊತೆಗಿನ ಆರ್ಥಿಕ ಕಾರಿಡಾರ್ ಯೋಜನೆಯನ್ನು ಪ್ರಸ್ತಾಪಿಸಿದ ಅವರು, ಪ್ರಾದೇಶಿಕ ಭಾವೈಕ್ಯತೆ ಹಾಗೂ ಸಂಪರ್ಕಶೀಲತೆಯು ಪಾಕಿಸ್ತಾನದ ಇತರ ಪ್ರಮುಖ ಆದ್ಯತೆಗಳೆಂದು ತಿಳಿಸಿದರು.







