ಮಲ್ಯ ಪಾಸ್‌ಪೋರ್ಟ್ ಅಮಾನತು

ಜಾಮೀನುರಹಿತ ವಾರಂಟ್‌ಗೆ ಕೋರಿಕೆ
ಬ್ರಿಟನ್‌ನಿಂದ ಗಡಿಪಾರಿಗೆ ರಂಗ ಸಜ್ಜು
ಹೊಸದಿಲ್ಲಿ,ಎ.15: ಬ್ಯಾಂಕುಗಳಿಗೆ 9,400 ಕೋ.ರೂ.ಗೂ ಹೆಚ್ಚಿನ ಸಾಲ ಬಾಕಿಯಿರಿಸಿ ಯಾರಿಗೂ ಸುಳಿವು ನೀಡದೆ ಬ್ರಿಟನ್‌ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಅವರ ಗಡೀಪಾರಿಗೆ ರಂಗ ಸಜ್ಜುಗೊಂಡಿದೆ. ಸಂಸದರೂ ಆಗಿರುವ ಮಲ್ಯ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ಸರಕಾರವು ಶುಕ್ರವಾರ ಅಮಾನತುಗೊಳಿಸಿದೆ. ಇದು ಮಲ್ಯರನ್ನು ಸಂಕಷ್ಟದಲ್ಲಿ ತಳ್ಳಿದೆ. ಪಾಸ್‌ಪೋರ್ಟ್‌ನ್ನು ರದ್ದುಗೊಳಿಸುವುದಾಗಿಯೂ ಸರಕಾರವು ಬೆದರಿಕೆಯೊಡ್ಡಿದೆ.
ಇದಿಷ್ಟೇ ಅಲ್ಲ,ಈಗ ಸ್ಥಗಿತಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಅಧ್ಯಕ್ಷ ಮಲ್ಯ ವಿರುದ್ಧದ ಅಕ್ರಮ ಹಣ ವರ್ಗಾವಣೆ ಆರೋಪಗಳ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ)ವು 900 ಕೋ.ರೂ.ಗಳ ಐಡಿಬಿಐ ಸಾಲ ವಂಚನೆ ಪ್ರಕರಣದಲ್ಲಿ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸುವಂತೆ ಕೋರಿ ಶುಕ್ರವಾರ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮೆಟ್ಟಿಲನ್ನೇರಿದೆ. ಅರ್ಜಿಯ ವಿಚಾರಣೆ ಶನಿವಾರ ನಡೆಯಲಿದ್ದು, ಇದು ಮಲ್ಯರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಲಿದೆ.
ಇಡಿ ಮೂರು ಬಾರಿ ಸಮನ್ಸ್ ಹೊರಡಿಸಿದ್ದರೂ ಅದರೆದುರು ಹಾಜರಾಗುವಲ್ಲಿ ಮಲ್ಯ ವಿಫಲರಾಗಿದ್ದರು.
ತನಿಖೆಗೆ ಅವರು ಸಹಕರಿಸುತ್ತಿಲ್ಲವಾದ್ದರಿಂದ ಅವರ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸುವಂತೆ ಇಡಿ ಮಾಡಿದ್ದ ಶಿಫಾರಸನ್ನು ಪುರಸ್ಕರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಕ್ಷಣದಿಂದಲೇ ಜಾರಿಗೆ ಬರುವಂತೆ ಒಂದು ತಿಂಗಳ ಅವಧಿಗೆ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ಅಮಾನತುಗೊಳಿಸಿದೆ.
ಪಾಸ್‌ಪೋರ್ಟ್‌ಗಳ ಕಾಯ್ದೆ, 1967ರ ಕಲಂ 10(3)(ಸಿ) ಅಡಿ ಪಾಸ್‌ಪೋರ್ಟ್‌ನ್ನೇಕೆ ಮುಟ್ಟುಗೋಲು ಹಾಕಿಕೊಳ್ಳಬಾರದು ಅಥವಾ ರದ್ದುಗೊಳಿಸಬಾರದು ಎನ್ನುವುದಕ್ಕೆ ಒಂದು ವಾರದಲ್ಲಿ ಉತ್ತರಿಸುವಂತೆ ಮಲ್ಯರಿಗೆ ಸೂಚಿಸಲಾಗಿದೆ. ಇದಕ್ಕೆ ತಪ್ಪಿದಲ್ಲಿ ಅವರ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದರು.
ಮಲ್ಯರಿಗೆ ಸಾಲ ನೀಡಿರುವ ಬ್ಯಾಂಕುಗಳ ಕೂಟ ಅವರ ವಿರುದ್ಧ ಸಾಲ ವಸೂಲಿ ನ್ಯಾಯಾಧಿಕರಣದ ಮೆಟ್ಟಿಲೇರಿದ್ದ ಮಾ.2ರಂದೇ ಅವರು ದೇಶವನ್ನು ತೊರೆದಿದ್ದರು.
ಆರಂಭದಲ್ಲಿ 4,000 ಕೋ.ರೂ. ಪಾವತಿಸಿ ಉಳಿದ ಸಾಲವನ್ನು ನಂತರ ಪಾವತಿಸುವುದಾಗಿ ಮಲ್ಯ ಬ್ರಿಟನ್‌ನಿಂದಲೇ ತನ್ನ ವಕೀಲರ ಮೂಲಕ ಮುಂದಿರಿಸಿದ್ದ ಕೊಡುಗೆಯನ್ನೂ ಬ್ಯಾಂಕುಗಳ ಕೂಟ ನಿರಾಕರಿಸಿದೆ. ಉದ್ದೇಶಪೂರ್ವಕ ಸುಸ್ತಿದಾರರು ಮತ್ತು ವಂಚಕರಿಂದ ಬಾಂ್ಯಕುಗಳ ಹಣದ ದುರುಪಯೋಗದ ಬಗ್ಗೆ ಸರಕಾರವು ಗಂಭೀರವಾಗಿ ಕಳವಳಗೊಂಡಿದೆ ಮತ್ತು ಈಗ ಸ್ಥಗಿತಗೊಂಡಿರುವ ಮಲ್ಯರ ಕಿಂಗ್‌ಫಿಷರ್ ಏರ್‌ಲೈನ್ಸ್‌ನ್ನು ಇಂತಹ ವಂಚಕ ಸಂಸ್ಥೆ ಎಂದು ಅದು ಪರಿಗಣಿಸಿರುವುದರಿಂದ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದವು.







