ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಮುಖ್ಯಮಂತ್ರಿ ಎಚ್ಚರಿಕೆ

ಬೆಂಗಳೂರು, ಎ.15: ಬರ ಪರಿಹಾರ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಈ ವಿಷಯದಲ್ಲಿ ಕುಂಟು ನೆಪಗಳನ್ನು ಹೇಳಿದರೆ ಸಹಿಸುವುದಿಲ್ಲ. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಲೋಪ ವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಬಳಿಕ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿದ್ದರಾಮಯ್ಯ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವು-ನೀರಿನ ಬಗ್ಗೆ ಪರಿಶೀಲಿಸಬೇಕು. ಅಗತ್ಯ ಇರುವ ಕಡೆಗಳಲ್ಲಿ ಗೋಶಾಲೆ, ಮೇವು ಬ್ಯಾಂಕ್ ಆರಂಭಿಸಬೇಕು. ಅಲ್ಲದೆ, ಹೊರ ರಾಜ್ಯಗಳಿಗೆ ಮೇವು ಸಾಗಣೆಯನ್ನು ನಿಷೇಧಿಸಬೇಕು ಎಂದು ಸೂಚನೆ ನೀಡಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ಎನ್‌ಆರ್‌ಇಜಿ)ಯಲ್ಲಿ ಫಲಾನುಭವಿಗಳಿಗೆ ಕೆಲಸ ಮಾಡಿದ ಮೂರು ದಿನಗಳೊಳಗೆ ಕೂಲಿ ಹಣ ಪಾವತಿಸಬೇಕು. ಬರ ಪರಿಹಾರ ಕಾರ್ಯಗಳಲ್ಲಿ ಲೋಪಗಳಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಒಟ್ಟು 22 ಮೇವು ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲ ತಾಲೂಕುಗಳಲ್ಲಿಯೂ ಅವಶ್ಯವಿರು ವಷ್ಟು ಮೇವು ಬ್ಯಾಂಕ್ ಮತ್ತು ಗೋಶಾಲೆಗಳನ್ನು ಆರಂಭಿಸಲು ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಇದೇ ವೇಳೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಸಚಿವ ಕೃಷ್ಣ ಭೈರೇಗೌಡ, ಶಾಸಕರಾದ ರಹೀಂ ಖಾನ್, ಪ್ರಭು ಚೌವ್ಹಾಣ್, ಈಶ್ವರ ಖಂಡ್ರೆ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಂದರ್ಭದಲ್ಲಿಯೂ ತೊಂದರೆ ಮಾಡಬೇಡಿ. ಕುಡಿಯುವ ನೀರಿಗೆ ಹಣಕಾಸಿನ ತೊಂದರೆಯಿಲ್ಲ, ಎಷ್ಟೇ ಹಣ ವೆಚ್ಚವಾದರೂ ಸರಕಾರ ನೀಡಲಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ







