ಬರದಿಂದ ಕಂಗೆಟ್ಟ ಭಾರತ
ಪ್ರಮುಖ ಜಲಾಶಯಗಳಲ್ಲಿ ನೀರಿನ ತೀವ್ರ ಅಭಾವ

ಹೊಸದಿಲ್ಲಿ, ಎ.15: ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆಯೆಂದು ಕೇಂದ್ರ ಜಲ ಆಯೋಗ (ಸಿಡಬ್ಲುಸಿ) ಶುಕ್ರವಾರ ಬಿಡುಗಡೆಗೊಳಿಸಿದ ಸಾಪ್ತಾಹಿಕ ದತ್ತಾಂಶಗಳ ವರದಿಯು ಬಹಿರಂಗಪಡಿಸಿದೆ. ಜಲಸಂಪನ್ಮೂಲ ಸಚಿವಾಲಯದ ಅಧೀನದಲ್ಲಿರುವ ತಾಂತ್ರಿಕಸಂಸ್ಥೆಯಾದ ಸಿಡಬ್ಲುಸಿಯು ದೇಶದ ಪ್ರಮುಖ 91 ಜಲಾಶಯಗಳಲ್ಲಿ ನೀರಿನ ನೇರ ಸಂಗ್ರಹದ ಸ್ಥಿತಿಗತಿಯ ಬಗ್ಗೆ ನಿರಂತರ ಕಣ್ಗಾವಲಿರಿಸುತ್ತಿದೆ.
ಈ ಜಲಾಶಯಗಳ ನೇರ ಸಂಗ್ರಹ ಸಾಮರ್ಥ್ಯವು 157.799 ಬಿಸಿಎಂ (ಬಿಲಿಯನ್ ಕ್ಯೂಬಿಕ್ ಮೀಟರ್) ಆಗಿದ್ದು, ಇದು ಭಾರತದಲ್ಲಿ ಇರುವ ಒಟ್ಟು ಜಲಾಶಯಗಳ ಸಂಗ್ರಹ ಸಾಮರ್ಥ್ಯದ ಶೇ.62ರಷ್ಟಾಗಿದೆ. ಜಲಾಶಯಗಳಲ್ಲಿ ಪ್ರವಾಹ ನಿಯಂತ್ರಣ, ವಿದ್ಯುತ್ ಉತ್ಪಾದನೆ, ನೌಕಾ ಸಂಚಾರಕ್ಕೆ ಬಳಕೆಯಾಗುವ ನೀರಿನ ಭಾಗವನ್ನು ನೇರ ಸಂಗ್ರಹ ಎಂದು ಹೇಳಲಾಗುತ್ತದೆ.
2016ರ ಎಪ್ರಿಲ್ 13ರಂದು ಬಿಡುಗಡೆಯಾದ ನೂತನ ವರದಿಯ ಪ್ರಕಾರ ಈ ಜಲಾಶಯಗಳಲ್ಲಿ ಲಭ್ಯವಿರುವನೀರಿನ ಸಂಗ್ರಹದ ಪ್ರಮಾಣವು 35.839 ಬಿಸಿಎಂಗಳಾಗಿದ್ದು, ಇದು ಈ ಜಲಾಶಯಗಳ ನೇರ ಸಂಗ್ರಹ ಸಾಮರ್ಥ್ಯದ ಶೇ.23ರಷ್ಟಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ ನೀರಿನ ನೇರ ಸಂಗ್ರಹ ಸಾಮರ್ಥ್ಯವು ಕಳೆದ ವರ್ಷದ ಸಂಗ್ರಹದ ಶೇ. 67ರಷ್ಟಾಗಿದೆ. ಅದೇ ರೀತಿ ಕಳೆದ ಹತ್ತು ವರ್ಷಗಳ ಸರಾಸರಿ ನೇರ ಸಂಗ್ರಹದ ಶೇ.77ರಷ್ಟಾಗಿದೆ. 2016ರಲ್ಲಿ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಅಧಿಕಗೊಳ್ಳುವ ಸಾಧ್ಯತೆಯಿರುವುದಾಗಿ ಭಾರತೀಯ ಪವಮಾನಶಾಸ್ತ್ರ ಇಲಾಖೆ ಮುನ್ಸೂಚನೆ ನೀಡಿದೆ. ಭಾರತದ ಪಶ್ಚಿಮ ಹಾಗೂ ದಕ್ಷಿಣ ಪ್ರಾಂತ್ಯಗಳು ಜಲಾಶಯಗಳ ನೀರಿನ ಅಭಾವದಿಂದ ತೀವ್ರವಾಗಿ ಪೀಡಿತವಾಗಿವೆ. ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಪಶ್ಚಿಮ ಪ್ರಾಂತ್ಯದ 27 ಜಲಾಶಯಗಳಲ್ಲಿ ನೀರಿನ ನೇರ ಸಂಗ್ರಹ ಮಟ್ಟವು ಕೇವಲ ಶೇ.18ರಷ್ಟಾಗಿದೆ. ಕಳೆದ ಇದೇ ಅವಧಿಯಲ್ಲಿ ಶೇ.36ರಷ್ಟು ಜಲಸಂಗ್ರಹವಿತ್ತು.
ದಕ್ಷಿಣ ಪ್ರಾಂತ್ಯದಲ್ಲಂತೂ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ಈ ಪ್ರಾಂತ್ಯದ 31 ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ. 15ರಷ್ಟು ನೀರು ಮಾತ್ರ ಲಭ್ಯವಿದೆ. ಮಹಾರಾಷ್ಟ್ರದ ಮೂರು, ಆಂಧ್ರ ಹಾಗೂ ತೆಲಂಗಾಣಗಳ ತಲಾ ಒಂದು ಜಲಾಶಯಗಳು ಪ್ರಸ್ತುತ ಸಂಪೂರ್ಣವಾಗಿ ಬತ್ತಿ ಹೋಗಿವೆ. ದೇಶದ ಒಟ್ಟು 91 ಜಲಾಶಯಗಳ ಪೈಕಿ 91ರಲ್ಲಿ ನೀರಿನ ಸಂಗ್ರಹ ಮಟ್ಟವು ಕಳೆದ ವರ್ಷಕ್ಕಿಂತ ಸರಾಸರಿ ಕಡಿಮೆ ಮಟ್ಟದಲ್ಲಿವೆ. ಪಶ್ಚಿಮ ಬಂಗಾಳ, ತ್ರಿಪುರಾ ಹಾಗೂ ಮಧ್ಯಪ್ರದೇಶಗಳಲ್ಲದೆ ಇತರ ಎಲ್ಲಾ 16 ರಾಜ್ಯಗಳಲ್ಲಿ ನೀರಿನ ಮಟ್ಟವು ವಾಡಿಕೆಗಿಂತ ಕೆಳ ಮಟ್ಟದಲ್ಲಿದೆ.





