ಮಸೀದಿ ನಿರ್ಮೂಲನೆಗೆ ಬಿಜೆಪಿಗೆ ಮತ ನೀಡಿ !
ಪಶ್ಚಿಮ ಬಂಗಾಳದಲ್ಲಿ ಬಯಲಾಯಿತು ಬಿಜೆಪಿಯ ಕೋಮುವಾದಿ ಚುನಾವಣಾ ಪ್ರಚಾರದ ಆಡಿಯೊ

ಕೊಲ್ಕತ್ತಾ, ಎ.1:ವಿಧಾನಸಭಾ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಓರ್ವ ಮತದಾರ ಹಾಗೂ ಇಬ್ಬರು ಬಿಜೆಪಿ ಬೆಂಬಲಿಗರೆಂದು ಹೇಳಲಾದವರ ನಡುವೆ ನಡೆದ ಫೋನ್ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಆಡಿಯೋವನ್ನು ಫೇಸ್ಬುಕ್‌ನ Desi Cracked Pot ಎಂಬ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಮೊದಲ ಆಡಿಯೋದಲ್ಲಿ ಒಬ್ಬ ಪುರುಷ ಮತದಾರ ಹಾಗೂ ಬಿಜೆಪಿ ಪ್ರಚಾರ ತಂಡದ ಮಹಿಳಾ ಸದಸ್ಯೆಯ ನಡುವಿನ ಸಂಭಾಷಣೆ ಇದೆ. ಇದರಲ್ಲಿ ಯಾಕೆ ನಾವು ಬಿಜೆಪಿಗೆ ಮತ ನೀಡಬೇಕು ಎಂದು ವಿವರಿಸಲು ಆ ಮತದಾರ ಬಿಜೆಪಿ ‘ಸದಸ್ಯೆ’ಯನ್ನು ಕೇಳುತ್ತಾನೆ.
ಆದರೆ ಇದಕ್ಕೆ ಆಘಾತಕಾರಿ ಉತ್ತರ ನೀಡುವ ಬಿಜೆಪಿ ಸದಸ್ಯೆ ‘ಮಸೀದಿಗಳು ಇರದಂತೆ ಮಾಡಲು ಹಾಗೂ ಭಾರತ ಪಾಕಿಸ್ತಾನ ಆಗದಂತೆ ತಡೆಯಲು ಮತ ನೀಡಬೇಕು ಎಂದು ಹೇಳುತ್ತಾರೆ.
ಇಂತಹ ತೀವ್ರ ಪ್ರಚೋದನಕಾರಿ ಕೋಮುವಾದಿ ಹೇಳಿಕೆಗೆ ಕೆರಳಿದ ಆ ಮತದಾರ ಬಿಜೆಪಿ ‘ಸದಸ್ಯೆ’ಗೆ ತಿರುಗೇಟು ನೀಡಿ ಇಂತಹ ಮತಾಂಧ ರಾಜಕೀಯ ಮಾಡಬೇಡಿ ಎಂದು ಹೇಳುತ್ತಾರೆ. ಅಲ್ಲಿಗೇ ನಿಲ್ಲಿಸದ ಆ ಮತದಾರ ಬಿಜೆಪಿ ಪ್ರಚಾರ ತಂಡದ ಇನ್ನೊಂದು ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅವರನ್ನು ಇಂತಹ ಕೋಮುವಾದಿ ಪ್ರಚಾರ ನಡೆಸುತ್ತಿರುವುದರ ವಿರುದ್ಧ ಟೀಕಿಸುತ್ತಾನೆ. ಈ ಆಡಿಯೊ ಈಗಾಗಲೇ 1,700 ಮಂದಿ ಶೇರ್ ಮಾಡಿದ್ದು, ಫೇಸ್ಬುಕ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಇದನ್ನು ಆಲಿಸಿದ್ದಾರೆ.







