53 ಸಾವಿರ ರೂಪಾಯಿ ಬಾಡಿಗೆ ಕಟ್ಟಲು ಸಾಧ್ಯವಿಲ್ಲದ ಪ್ರಿಯಾಂಕಾ ಗಾಂಧಿ!

ಹೊಸದಿಲ್ಲಿ, ಎ. 16: ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾಗಾಂಧಿ ವಾಜಪೇಯಿ ಸರಕಾರಕ್ಕೆ ತಮ್ಮ ಭವ್ಯವಾದ 2,765.18 ಚದರ ಮೀಟರ್‌ಗಳ ಬೃಹತ್ ಮನೆಗೆ ನೀಡುತ್ತಿದ್ದ 53,421 ರೂಪಾಯಿ ಬಾಡಿಗೆಯನ್ನು 8,888 ರೂಪಾಯಿಗೆ ಇಳಿಸುವಂತೆ ಕೋರಿದ್ದರು. ಇದಕ್ಕೆ ಅವರು ನೀಡಿದ್ದ ಕಾರಣ, ಅದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು ಎನ್ನುವುದು.
ಇದೀಗ ಪ್ರಿಯಾಂಕಾಗಾಂಧಿ ಅವರು ಲೋಧಿ ಎಸ್ಟೇಟ್‌ನಲ್ಲಿರುವ ಸರಕಾರಿ ವಾಸ್ತವ್ಯದ ಟೈಪ್ 6 ಕಟ್ಟಡಕ್ಕೆ 31,300 ರೂಪಾಯಿ ಬಾಡಿಗೆ ನೀಡುತ್ತಿದ್ದಾರೆ. ಪಂಜಾಬ್‌ನ ಮಾಜಿ ಡಿಜಿಪಿ ಕೆಪಿಎಸ್ ಗಿಲ್, ಅಖಿಲ ಭಾರತದ ಭಯೋತ್ಪಾದನಾ ನಿಗ್ರಹ ಪಡೆಯ ಮುಖ್ಯಸ್ಥ ಎಂ.ಎಸ್.ಬಿಟ್ಟಾ ಹಾಗೂ ‘ಪಂಜಾಬ್ ಕೇಸರಿ’ ಸಂಪಾದಕ ಅಶ್ವನಿ ಕುಮಾರ್ ಹಾಗೂ ಪ್ರಿಯಾಂಕಾಗಾಂಧಿಯವರಿಗೆ 2012ರಲ್ಲಿ ಭದ್ರತಾ ಕಾರಣಗಳಿಗಾಗಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅವರು ಕೂಡಾ ಸರಿಸುಮಾರು ಅಷ್ಟೇ ಪ್ರಮಾಣದ ಬಾಡಿಗೆ ನೀಡುತ್ತಿದ್ದಾರೆ.
ಪ್ರಿಯಾಂಕಾಗಾಂಧಿ 2002ರ ಮೇ 7ರಂದು ಸರಕಾರಕ್ಕೆ ಪತ್ರ ಬರೆದು, ಈ ಬಾಡಿಗೆ ಅತ್ಯಧಿಕವಾಗಿದ್ದು, ನಮ್ಮ ಸಾಮರ್ಥ್ಯಕ್ಕೆ ಮೀರಿದ್ದು ಎಂದು ಹೇಳಿದ್ದಾರೆ. ಎಸ್‌ಪಿಜಿ ಮುಖ್ಯಸ್ಥರ ಮನವಿಯ ಮೇರೆಗೆ ಸರಕಾರಿ ಬಂಗಲೆಗೆ ಸ್ಥಳಾಂತರಗೊಂಡಿದ್ದು, ಈ ಬಂಗಲೆಯ ದೊಡ್ಡ ಭಾಗವನ್ನು ಎಸ್‌ಪಿಜಿ ಬಳಸಿಕೊಳ್ಳುತ್ತದೆ. ನಾವು ನಮ್ಮ ಅನುಕೂಲಕ್ಕಾಗಿ ಇಲ್ಲಿಗೆ ಬಂದಿಲ್ಲ. ಭದ್ರತಾ ಕಾರಣಗಳಿಗಾಗಿ ಆಗಮಿಸಿದ್ದೇವೆ. ಈ ಹಿಂದೆ ನೀಡುತ್ತಿದ್ದ 28,451 ರೂಪಾಯಿಯನ್ನೇ ನೀಡುತ್ತಾ ಬರುತ್ತೇನೆ ಎಂದು ಅವರು ವಿವರಿಸಿದ್ದರು.
ಈ ನಾಲ್ಕು ಮಂದಿ ಕೂಡಾ ಬಾಡಿಗೆ ಹೆಚ್ಚಳ ಬಳಿಕವೂ ಹಳೆಯ ಬಾಡಿಗೆಯನ್ನೇ ನೀಡುತ್ತಿದ್ದರು. 2004ರ ಜನವರಿ 31ರವರೆಗೆ 3.76 ಲಕ್ಷ ರೂಪಾಯಿ ಬಾಕಿಯನ್ನು ಪ್ರಿಯಾಂಕ ಉಳಿಸಿಕೊಂಡಿದ್ದರು. ನೊಯ್ಡಿದ ನಿವಾಸಿ ರೇವ್ ಅಶಿಶ್ ಭಟ್ಟಾಚಾರ್ಯ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿದ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ.





