ತಾನು ಹಾಗೇಕೆ ಮಾಡಿದೆ ಎಂದು ಗೊತ್ತಿಲ್ಲ
ಮೊದಲು 3 ವರ್ಷದ ಮಗಳು, ಅನಂತರ ಏಳು ತಿಂಗಳ ಮಗನ ಹತ್ಯೆಗೈದ ತಾಯಿಯ ತಪ್ಪೊಪ್ಪಿಗೆ!

ಬ್ರಿಟನ್, ಎ. 16: ಎಂತೆಂತಹಾ ತಾಯಂದಿರು ಈ ಜಗತ್ತಿನಲ್ಲಿದ್ದಾರೋ ಗೊತ್ತಿಲ್ಲ. ತಾಯಿಯೇ ಮಕ್ಕಳ ಪಾಲಿಗೆ ಹಂತಕಿಯಾದರೆ ಹೇಗೆ?. ಹೊಟ್ಟೆಯಲ್ಲಿಯೇ ಶಿಶುವನ್ನು ಕರಗಿಸಿ ಗರ್ಭ ಪಾತ ಮಾಡಿಸಿಕೊಳ್ಳುವುದು ಇಂದು ಸಾಮಾನ್ಯವಾಗಿದೆ. ಆದರೆ, ಬ್ರಿಟನ್‌ನಲ್ಲಿ ತಾಯೊಬ್ಬಳು ಮೂರು ವರ್ಷದ ಪುತ್ರಿಯ ಹತ್ಯೆ ಅಪರಾಧಕ್ಕಾಗಿ ಜೈಲು ಪಾಲಾಗಿದ್ದರೆ ಇದೀಗ ತನ್ನ ಏಳು ತಿಂಗಳ ಗಂಡು ಮಗುವಿನ ಹತ್ಯೆಗೈದದ್ದೂ ತಾನೆ ಎಂದು ಹೇಳಿದ್ದಾಳೆ. ನ್ಯಾಯಾಲಯ ಅವಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ. ಮೂವತ್ತೇಳು ವರ್ಷದ ಲೆಸ್ಲಿ ಇನ್‌ಫರ್ಡ್ ಎಂಬ ಮಹಿಳೆ ಏಳು ತಿಂಗಳು ಪ್ರಾಯದ ತನ್ನ ಪುತ್ರ ಹಾರ್ಲ್ ಇನ್‌ಫರ್ಡ್‌ನನ್ನೂ ತಾನೇ ಕೊಂದೆ ಎಂದು ಇದೀಗ ಒಪ್ಪಿಕೊಂಡಿದ್ದಾಳೆ. ಅವಳ ಈ ಗಂಡು ಮಗುವಿನ ಮೃತದೇಹ 2003ರಲ್ಲಿ ಈಸ್ಟ್ ಸಸೆಕ್ಸ್‌ನಲ್ಲಿ ಅವಳ ಮನೆಯಲ್ಲಿಯೇ ದೊರಕಿತ್ತು. ಲೆಸ್ಲಿ ತನ್ನ ಮೂರು ವರ್ಷದ ಹೆಣ್ಣು ಮಗುವಿನ ಹತ್ಯೆಗೈದದ್ದಕ್ಕಾಗಿ ಆಕೆಗೆ 2012ರಲ್ಲಿ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಈಗ ಗಂಡು ಮಗುವಿನ ಹತ್ಯೆಯೂ ಸಾಬೀತಾಗಿದ್ದರಿಂದ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಮಗಳಾದ ಲೂಸಿಯ ಹತ್ಯೆಯ ಶಿಕ್ಷೆ ಅನುಭವಿಸುತ್ತಿದ್ದ ಲೆಸ್ಲಿ ಜೈಲಿನಲ್ಲಿ ತಾನೇ ತನ್ನ ಗಂಡುಮಗುವನ್ನೂ ಹತ್ಯೆಗೈದೆ ಎಂದು ಒಪ್ಪಿಕೊಂಡಿದ್ದಾಳೆ. ಅದಕ್ಕಾಗಿ ನನಗೆ ಪಶ್ಚಾತಾಪವಿದೆ ಎಂದಿದ್ದಾಳೆ.
ತಾನು ಮಾಡಿದ್ದು ಕೆಟ್ಟ ಕನಸಾಗಿ ತನ್ನನ್ನು ಕಾಡುತ್ತಿದೆ ಎಂದು ಜೈಲಧಿಕಾರಿಗಳಿಗೆ ಅವಳು ತಿಳಿಸಿದ್ದಳು. ನನ್ನ ಮೆದುಳಿನಲ್ಲಿ ಏನೋ ಬಂದಿದೆ. ನಾನು ಕೋಣೆಗೆ ವಾಪಸ್ ಹೋದೆ. ಮಗು ಮಲಗಿದ್ದಲ್ಲಿಗೆ ಹೋದೆ. ದಿಂಬಿನಿಂದ ಅವನು ಉಸಿರು ನಿಲ್ಲುವವರೆಗೂ ಒತ್ತಿದೆ. ಅನಂತರ ನಾನು ನೋಡಿದಾಗ ಮಗುವಿನ ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ಆಗ ಅವನನ್ನು ಗಾಯಗೊಳಿಸಿದೆ ಎಂದು ನನಗನಿಸಿತು. ನಾನು ಹಾಗೆ ಯಾಕೆ ಮಾಡಿದೆ ಎಂದು ನನಗೆ ಗೊತ್ತಿಲ್ಲ ಎಂದು ಆಕೆ ತಪ್ಪೊಪ್ಪಿಗೆಯಲ್ಲಿ ಬರೆದಿದ್ದಾಳೆ.
ಅವಳ ಏಳು ತಿಂಗಳ ಗಂಡು ಮಗು ಸಹಜವಾಗಿ ಮೃತವಾಗಿದೆ ಎಂದು ಭಾವಿಸಲಾಗಿತ್ತು. ಲೆಸ್ಲಿಯ ಪತಿ ಅವಳನ್ನು ಕ್ಷಮಿಸುತ್ತಾರೆ. ಆದರೆ ಲೆಸ್ಲಿ ಮಕ್ಕಳ ಬಗ್ಗೆ ಸುಳ್ಳು ಹೇಳಿದ್ದಾಳೆ ಎಂದು ವರದಿಗಳು ತಿಳಿಸಿವೆ.





