ಬೊಕರಾದಲ್ಲಿ ಕರ್ಫ್ಯೂ, ಹಝಾರಿ ಬಾಗ್‌ನಲ್ಲಿ ಓರ್ವನ ಹತ್ಯೆ
ಝಾರ್ಕಂಡ್: ಹಿಂಸಾಗ್ರಸ್ತವಾದ ರಾಮನವಮಿ ಮೆರವಣಿಗೆ

ರಾಂಚಿ, ಎ. 16: ಜಾರ್ಖಂಡ್ ನಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಕೋಮು ಉದ್ವಿಗ್ನ ಪರಿಸ್ಥಿತಿನಿರ್ಮಾಣವಾಗಿದ್ದು, ಬೆಂಕಿ ಹಚ್ಚುವಿಕೆ ಮತ್ತು ಎರಡುಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ಸ್ಫೋಟವಾಗಿದೆ.
ಪರಿಸ್ಥಿತಿ ನಿಯಂತ್ರಿಸಲು ಕರ್ಫ್ಯೂ ಹೇರಲಾಗಿದೆ ಎಂದು ವರದಿಗಳು ತಿಳಿಸಿವೆ. ಹಝಾರಿಬಾಗ್‌ನ ಕೆರೆಡಾರಿ ಠಾಣೆ ವ್ಯಾಪ್ತಿಯ ಪಾಂಡೂ ಎಂಬಲ್ಲಿ ವ್ಯಕ್ತಿಯೊಬ್ಬನ ಹತ್ಯೆಯಾಗಿದೆ. ಬೊಕಾರೊ ಘಟನೆಯಲ್ಲಿ ಉಪಾಯುಕ್ತ ಸಹಿತ ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಚತರಾದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳಿಸುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಪೊಲೀಸರು ಹಲವಾರು ಮಂದಿಯನ್ನು ವಶಕ್ಕೆ ಪಡೆದಿದ್ದು ಬೊಕಾರೊ ಉಪಾಯುಕ್ತ ರಾಯ್ ಮಹಿಮಾಪತ್ ರೇ ಅವರು ನಗರದ ಸೆಕ್ಟರ್-12, ಮಾರಾಫಾರಿ, ಬಾಲಿಡೀಹ್ ಮತ್ತು ಬೊಕಾರೊ ಉಕ್ಕು ಸಿಟಿ ಠಾಣೆ ವ್ಯಾಪ್ತಿಯಲ್ಲಿ ಕರ್ಪ್ಯೂ ಹೇರಿದ್ದಾರೆ. ಇಡೀ ಪ್ರದೇಶದಲ್ಲಿ ಶಾಂತಿ ಕಾಪಾಡುವುದಕ್ಕಾಗಿ ಹೆಚ್ಚುವರಿ ಪೊಲೀಸ್ ದಳವನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
ಹಲವು ಜನರನ್ನು ವಶಕ್ಕೆ ಪಡೆಯಲಾಗಿದೆ, ಪೊಲೀಸ್ ಗಸ್ತು ಏರ್ಪಡಿಸಲಾಗಿದೆ ಎಂದು ಬೊಕಾರೋ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ರಾಮನವಮಿ ಮೆರವಣಿಗೆ ಹೋಗುವಾಗ ಕೋಪೊದ್ರಿಕ್ತ ಗುಂಪು ವಾಹನಗಳಿಗೆ ಬೆಂಕಿ ಹಚ್ಚಿತ್ತು. ಉದ್ರಿಕ್ತಗುಂಪು ಕೆಲವು ಮನೆಗಳು ಮತ್ತು ಅಂಗಡಿಗಳಿಗೆ ಬೆಂಕಿಇಟ್ಟಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘರ್ಷಣೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಡಿಐಜಿ ಮತ್ತು ಎಸ್ಪಿ ಸಹಿತ ಜಿಲ್ಲೆಯ ಪ್ರಮುಖ ಪೊಲೀಸ್ ಅಧಿಕಾರಿಗಗಳಲ್ಲದೆ ಪೊಲೀಸ್ ಪಡೆ ಅಲ್ಲಿ ಕ್ಯಾಂಪ್ ಹೂಡಿದೆ ಎಂದು ವರದಿಯಾಗಿದೆ.





