ಬರ ನಿರ್ವಹಣೆಯಲ್ಲಿ ಸರಕಾರಗಳ ನಿರ್ಲಕ್ಷ: ಕೋಡಿಹಳ್ಳಿ

ಬೆಂಗಳೂರು, ಎ.16: ರಾಜ್ಯದಲ್ಲಿ ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರ್ಲಕ್ಷ ಮನೋಭಾವ ತಾಳುತ್ತಿದ್ದು, ರಾಜಕೀಯ ಲಾಭಗಳಿಸಿಕೊಳ್ಳಲು ಹವಣಿಸುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಕರ ಬರ ತಾಂಡವವಾಡುತ್ತಿದ್ದು, ಜನ, ಜಾನುವಾರುಗಳು ಹನಿ ಹನಿ ನೀರಿಗೂ ಪರಿತಪಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ವಹಿಸಿವೆ ಎಂದರು.
ಕೇಂದ್ರದಲ್ಲಿ ಮೋದಿ ಸರಕಾರ ಕಾರ್ಪೊರೇಟ್ ವಲಯವನ್ನು ಮೆಚ್ಚಿಸುತ್ತಾ ರೈತರನ್ನು ವ್ಯವಸ್ಥಿತವಾಗಿ ತುಳಿಯುವ ಕೆಲಸ ಮಾಡುತ್ತಿದೆ. ಆದರೆ ರಾಜ್ಯದಲ್ಲಿ ರೈತ ನಾಯಕನ ಸೋಗು ಹಾಕಿಕೊಂಡು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಯಾತ್ರೆ ಆರಂಭಿಸಿದ್ದಾರೆ.ರೈತ ಪರ ಕಾಳಜಿ ತೋರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಪ್ರವಾಸದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಎರಡು ರಾಜಕೀಯ ಪಕ್ಷಗಳು ರಾಜಕೀಯ ದೊಂಬರಾಟದಲ್ಲಿ ತೊಡಗಿದ್ದು, ಇನ್ನಾದರೂ ನೈಜ ಪರಿಸ್ಥಿತಿ ಅರಿತು, ಬರ ಪರಿಹಾರ ಕಾಮಗಾರಿಗಳು ಮತ್ತು ಸಮರೋಪಾದಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಿಣಿ ಶಿವಪ್ಪ, ಬೆಂಗಳೂರು ಉತ್ತರ ತಾಲೂಕು ಅಧ್ಯಕ್ಷ ವಿ.ಆರ್.ನಾರಾಯಣರೆಡ್ಡಿ, ಮುಖಂಡ ನಾಗರಾಜು ಉಪಸ್ಥಿತರಿದ್ದರು.





