ದಿ ಹನುಮಂತನಗರ ಸಹಕಾರಿ ಬ್ಯಾಂಕ್‌ಗೆ ಸುವರ್ಣ ಸಂಭ್ರಮ
ಬೆಂಗಳೂರು, ಎ. 16: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಪಿ.ವಿ.ವೀರಣ್ಣಗೌಡ ಅವರ ಸಾರಥ್ಯದಲ್ಲಿ ಕೇವಲ 207 ಸದಸ್ಯರಿಂದ 1965ರಲ್ಲಿ ಸ್ಥಾಪನೆಯಾದ ದಿ ಹನುಮಂತನಗರ ಸಹಕಾರಿ ಬ್ಯಾಂಕ್ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದು, 50 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮ ಆಚರಿಸುತ್ತಿದೆ.
ಇದರ ಉದ್ಘಾಟನಾ ಕಾರ್ಯಕ್ರಮ ಎ.16ರಂದು ಎನ್.ಆರ್.ಕಾಲನಿಯ ಆಚಾರ್ಯ ಪಾಠಶಾಲಾ ಮೈದಾನದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ವೇದಿಕೆಯಲ್ಲಿ ನಡೆಯಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಸಿ.ವಿ.ಬಾಲಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಪ್ರಸ್ತುತ 12 ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡಿದೆ. 250 ಕೋಟಿ ರೂ. ದುಡಿಮೆ ಬಂಡವಾಳ ಹೊಂದಿದೆ. 7 ಕೋಟಿ ಷೇರು ಬಂಡವಾಳ ಹೊಂದಿದ್ದು, 159 ಕೋಟಿ ರೂ. ಸಾಲ ನೀಡಿದೆ. 2016-17ನೆ ಸಾಲಿನಲ್ಲಿ ಬ್ಯಾಂಕ್ 2.17 ಕೋಟಿ ರೂ. ಲಾಭ ಗಳಿಸಿದ್ದು, ಶೇ.98ರಷ್ಟು ಸಾಲ ವಸೂಲಾತಿ ನಡೆಸಿದೆ. ನಗರದ ಇತರ ಕಡೆಗಳಲ್ಲೂ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಇಂತಹ ಬ್ಯಾಂಕ್ ಸುವರ್ಣ ಮಹೋತ್ಸವ ಆಚರಿಸುತ್ತಿರುವುದನ್ನು ಅವಿಸ್ಮರಣೀಯವನ್ನಾಗಿಸಲು ಉದ್ದೇಶಿಸಲಾಗಿದೆ ಎಂದರು.
ಎ.19ರಂದು ನಡೆಯಲಿರುವ ಸುವರ್ಣ ಸಂಭ್ರಮ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥಾಪಕ ಅಧ್ಯಕ್ಷ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಹಿಸಲಿದ್ದಾರೆ. ಆದಿಚುಂಚನಗಿರಿ ಮಠಾಧೀಶ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹೊರತರಲಿರುವ ‘ಹನುಮದ್ವಿಲಾಸ’ ಸ್ಮರಣ ಸಂಚಿಕೆಯನ್ನು ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್ ಬಿಡುಗಡೆ ಮಾಡಲಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.







