ಮಹದೇವಪೇಟೆ ರಸ್ತೆ ವಿಸ್ತರಣೆ: ನಗರಸಭೆಯಿಂದ ಕಟ್ಟಡಗಳ ತೆರವು

ಮಡಿಕೇರಿ, ಎ.16: ನಗರದ ಮಹದೇವಪೇಟೆ ರಸ್ತೆ ವಿಸ್ತರಣಾ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರಸ್ತೆ ಬದಿಯ ಕಟ್ಟಡ ಹಾಗೂ ನಿವೇಶನದ ತೆರವು ಕಾರ್ಯಾಚರಣೆೆಯನ್ನು ಇಂದು ಬೆಳಗ್ಗೆ 6 ಗಂಟೆಯಿಂದಲೇ ನಗರಸಭೆ ಆರಂಭಿಸಿತು.
ರಸ್ತೆ ವಿಸ್ತರಣೆಗಾಗಿ ನಗರದ ಇಂದಿರಾಗಾಂಧಿ ವೃತ್ತದಿಂದ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಎ.ವಿ. ಶಾಲೆಯವರೆಗೆ ಎ.17 ರಂದು ಕೂಡ ಕಾರ್ಯಾಚರಣೆ ಮುಂದುವರಿಯಲಿದೆ.
ಕಳೆದ 2 ತಿಂಗಳಿನಿಂದ ಈ ಭಾಗದ ಕಟ್ಟಡಗಳನ್ನು ತೆರವುಗೊಳಿಸುವಂತೆ ಕಟ್ಟಡಗಳ ಮಾಲಕರಿಗೆ ನಗರಸಭೆ ಸೂಚನೆ ನೀಡುತ್ತಲೇ ಬಂದಿತ್ತು. ಸಾಕಷ್ಟು ಕಾಲಾವಕಾಶ ನೀಡಿದ್ದರೂ ಕೆಲವು ಅಂಗಡಿ, ಮಳಿಗೆ ಮತ್ತು ಮನೆಗಳನ್ನು ತೆರವುಗೊಳಿಸದೆ ಇದ್ದುದರಿಂದ ಅನಿವಾರ್ಯವಾಗಿ ನಗರಸಭೆ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆೆ ಆರಂಭಿಸಬೇಕಾಯಿತು.
ಈ ಸಂದರ್ಭ ಕೆಲವು ನಿವಾಸಿಗಳಿಂದ ಆಕ್ಷೇಪ ವ್ಯಕ್ತವಾಯಿತಾದರೂ ನಿರಾತಂಕವಾಗಿ ತೆರವು ಕಾರ್ಯಾಚರಣೆ ನಡೆಯಿತು. ಈ ರಸ್ತೆ ಬದಿಯಲ್ಲಿರುವ ಮಸೀದಿ ಹಾಗೂ ದೇವಾಲಯದ ಆವರಣ ತೆರವುಗೊಳಿಸಲು ಕೊಂಚ ಕಾಲಾವಕಾಶ ನೀಡಲಾಗಿದೆ. ಇಂದಿರಾ ಗಾಂಧಿ ವೃತ್ತದಿಂದ ಎ.ವಿ. ಶಾಲೆಯವರೆಗಿನ ಕಟ್ಟಡಗಳ ತೆರವು ಕಾರ್ಯಾಚರಣೆ ಪೂರ್ಣಗೊಂಡ ತಕ್ಷಣ ರಸ್ತೆ ಕಾಂಕ್ರಿಟೀಕರಣ ನಡೆಯಲಿದೆ. ಅತ್ಯಂತ ಕಿಷ್ಕಿಂದೆಯಿಂದ ಕೂಡಿರುವ ಮಹದೇವಪೇಟೆ ರಸ್ತೆ ಆರಂಭದಲ್ಲಿ 25 ಅಡಿಯಷ್ಟು ವಿಸ್ತರಣೆಗೊಳ್ಳಬೇಕೆೆನ್ನುವ ಯೋಜನೆ ಇತ್ತು. ಆದರೆ, ಇತ್ತೀಚೆಗೆ ಅದನ್ನು 20 ಅಡಿಗೆ ಸೀಮಿತಗೊಳಿಸಲಾಗಿದೆ. ಕೆಲವು ಮಂದಿ ತಮ್ಮ ಮನೆಯನ್ನು ತೆರವುಗೊಳಿಸುವುದನ್ನು ತಡೆಯಲು ತಡೆಯಾಜ್ಞೆ ತಂದಿರುವ ಬಗ್ಗೆ ಮಾಹಿತಿ ಲಭಿಸಿದೆ. ನಗರೋತ್ಥಾನದ ಎರಡನೆ ಹಂತದ ಅನುದಾನವನ್ನು ಈ ವರ್ಷ ವಿನಿಯೋಗಿಸಲೇ ಬೇಕಾದ ಅನಿವಾರ್ಯತೆ ಇದ್ದ ಕಾರಣ ನಗರಸಭೆ ರಸ್ತೆ ವಿಸ್ತರಣೆೆ ಕಾಮಗಾರಿಗೆ ಕೊನೆಗೂ ಚಾಲನೆ ನೀಡಿದೆ.
ನಗರಸಭೆಯ ಅಧಿಕಾರಿಗಳ ತಂಡದೊಂದಿಗೆ ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆಗೆ ಸಹಕರಿಸಿದರು. ಸಂದರ್ಭ ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಪೌರಾಯುಕ್ತರಾದ ಪುಷ್ಪಾವತಿ ಹಾಗೂ ಕೆಲವು ಸದಸ್ಯರು ಹಾಜರಿದ್ದರು.







